ADVERTISEMENT

ಡಿ.ಸಿ ಕಚೇರಿ ಎದುರು ಗ್ರಾಮ ಲೆಕ್ಕಾಧಿಕಾರಿಗಳ ಧರಣಿ

ಪಡಿತರ ಚೀಟಿ ಪರಿಶೀಲನೆಯಿಂದ ಮುಕ್ತಿ ನೀಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 8:56 IST
Last Updated 24 ಸೆಪ್ಟೆಂಬರ್ 2017, 8:56 IST

ಕೋಲಾರ: ಗ್ರಾಮ ಲೆಕ್ಕಾಧಿಕಾರಿಗಳನ್ನು ಪಡಿತರ ಚೀಟಿ ಪರಿಶೀಲನಾ ಕಾರ್ಯದಿಂದ ಮುಕ್ತಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.

‘ಪಡಿತರ ಚೀಟಿಗಳ ಪರಿಶೀಲನಾ ಕಾರ್ಯ ನಿರ್ವಹಿಸಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಆ ಕೆಲಸವನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಿದ್ದಾರೆ. ಇದರಿಂದ ಕಾರ್ಯ ಒತ್ತಡ ಹೆಚ್ಚಿದೆ. ಈ ಸಮಸ್ಯ ಬಗೆಹರಿಸಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಿಡಿಒಗಳು ತಮ್ಮ ಕಾರ್ಯ ಒತ್ತಡ ಕಡಿಮೆ ಮಾಡಿಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಪಡಿತರ ಚೀಟಿಗಳ ಪರಿಶೀಲನೆಯ ಜವಾಬ್ದಾರಿ ನೀಡಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆ ಅರ್ಜಿಗಳು ಹಾಗೂ ಸಕಾಲ ಅರ್ಜಿಗಳ ವಿಲೇವಾರಿ ಕಾರ್ಯದ ಜತೆ ಪಡಿತರ ಚೀಟಿಗಳ ಪರಿಶೀಲನೆ ಕೆಲಸ ಮಾಡಲು ಲೆಕ್ಕಾಧಿಕಾರಿಗಳಿಗೆ ಕಷ್ಟವಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಎಸ್.ಎನ್.ರಾಜೇಂದ್ರಪ್ರಸಾದ್‌ ಹೇಳಿದರು.

ADVERTISEMENT

‘ಬಹುಪಾಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಇಂಟರ್‌ನೆಟ್‌ ಹಾಗೂ ಕಂಪ್ಯೂಟರ್‌ ಸೌಲಭ್ಯ ಕಲ್ಪಿಸಿಲ್ಲ. ಮೂಲಸೌಕರ್ಯ ಸಮಸ್ಯೆ ನಡುವೆಯೂ ಲೆಕ್ಕಾಧಿಕಾರಿಗಳು ಇನ್ಪುಟ್‌ ಸಬ್ಸಿಡಿ, ಕೆರೆಗಳ ಮಾಹಿತಿ, ಭೂಮಿ ಕೇಂದ್ರದಲ್ಲಿ ಅನುಮೋದನೆ ನೀಡುವುದು, ಕೃಷಿ ಗಣತಿ, ವಿವಾಹ ನೊಂದಣಿ, ಜನನ–ಮರಣ ದಾಖಲಾತಿ, ಬೆಳೆ ನಷ್ಟ ಸಮೀಕ್ಷೆ, ಬೆಳೆ ಪಹಣಿ, ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

ಒತ್ತಡವಾಗುತ್ತಿದೆ: ‘ಪಿಡಿಒಗಳಿಗೆ ಕಾರ್ಯ ನಿರ್ವಹಣೆಯಲ್ಲಿ ಸಹಾಯ ಮಾಡಲು ಗ್ರಾ.ಪಂ ಕಾರ್ಯದರ್ಶಿಗಳು, ತೆರಿಗೆ ಸಂಗ್ರಹಗಾರರು, ಕಂಪ್ಯೂಟರ್‌ ಆಪರೇಟರ್‌ಗಳಿದ್ದಾರೆ. ಆದರೆ, ಗ್ರಾಮ ಲೆಕ್ಕಾಧಿಕಾರಿಗಳ ಸಹಾಯಕ್ಕೆ ಯಾವುದೇ ಸಿಬ್ಬಂದಿಯನ್ನು ಕೊಟ್ಟಿಲ್ಲ. ಪಡಿತರ ಚೀಟಿಗಳ ಪರಿಶೀಲನಾ ಕಾರ್ಯದಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡವಾಗುತ್ತಿದೆ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ಪಡಿತರ ಚೀಟಿಗಳ ಪರಿಶೀಲನಾ ಕಾರ್ಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ವಹಿಸಬೇಕು. ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಅನ್ಯ ಇಲಾಖೆಯ ಕಾರ್ಯಗಳನ್ನು ವಹಿಸಬಾರದು. ವೇತನ ಪರಿಷ್ಕರಿಸಬೇಕು. ಗ್ರಾಮ ಸಹಾಯಕರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಲೋಕೇಶ್, ಖಜಾಂಚಿ ಎಸ್.ಜನಾರ್ದನ್, ಸದಸ್ಯರಾದ ಸುರೇಶ್, ಮಂಜುನಾಥ್, ಶ್ರೀನಿವಾಸ್‌, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

**

ಕಾರ್ಯ ಒತ್ತಡ ಹೆಚ್ಚಿರುವುದರಿಂದ ಗ್ರಾಮ ಲೆಕ್ಕಾಧಿಕಾರಿಗಳ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರ ವೈಯಕ್ತಿಕ ಬದುಕಿಗೆ ಸಮಸ್ಯೆಯಾಗುತ್ತಿದೆ. ಹಲವೆಡೆ ಪಡಿತರ ಚೀಟಿ ಪರಿಶೀಲನೆ ವೇಳೆ ಫಲಾನುಭವಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
–ಎಸ್.ಎನ್.ರಾಜೇಂದ್ರಪ್ರಸಾದ್‌, ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.