ADVERTISEMENT

ನಾಳಿನ ಇತಿಹಾಸಕ್ಕಾಗಿ ಪತ್ರಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 9:23 IST
Last Updated 17 ಡಿಸೆಂಬರ್ 2017, 9:23 IST
28 ವರ್ಷಗಳಿಂದ ಪ್ರಜಾವಾಣಿ ಮತ್ತು ಸುಧಾ ವಾರ ಪತ್ರಿಕೆಯ ಓದುಗರಾಗಿರುವ ಪಟ್ಟಣದ ವಿ.ವರದರಾಜು. ಅವರು ವಿಶೇಷ ಲೇಖನಗಳ ಸಂಗ್ರಹವನ್ನು ಪ್ರದರ್ಶಿಸಿದರು
28 ವರ್ಷಗಳಿಂದ ಪ್ರಜಾವಾಣಿ ಮತ್ತು ಸುಧಾ ವಾರ ಪತ್ರಿಕೆಯ ಓದುಗರಾಗಿರುವ ಪಟ್ಟಣದ ವಿ.ವರದರಾಜು. ಅವರು ವಿಶೇಷ ಲೇಖನಗಳ ಸಂಗ್ರಹವನ್ನು ಪ್ರದರ್ಶಿಸಿದರು   

ರಾಜಗೋಪಾಲ

ಇಂದಿನ ಪತ್ರಿಕೆ ನಾಳಿನ ರದ್ದಿ ಎಂದು ಬಹುತೇಕರು ತಿಳಿದಿದ್ದಾರೆ. ಆದರೆ ವಿ.ವರದರಾಜು ಇಂದಿನ ಪತ್ರಿಕೆ ನಾಳಿನ ಇತಿಹಾಸ ಎಂದು ತಿಳಿದು 28 ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆಯನ್ನು ಓದಿ ಲೇಖನ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ಗ್ರಾಮದ ನಿವಾಸಿ ವರದರಾಜ್ 30 ವರ್ಷಗಳ ಹಿಂದೆ ತನ್ನ ತುತ್ತಿನ ಚೀಲ ತುಂಬಿಸಿಕೊಳ್ಳಲು ಗ್ರಾಮ ತೊರೆದು ಪಟ್ಟಣಕ್ಕೆ ಬಂದು ಕ್ಷೌರಿಕ ಅಂಗಡಿ ಆರಂಭಿಸಿದ್ದರು. ನಂತರ ಪ್ರಜಾವಾಣಿ ಪತ್ರಿಕೆ ಮತ್ತು ಸುಧಾ ವಾರಪತ್ರಿಕೆಯ ಶಾಶ್ವತ ಓದುಗರಾಗಿ ಪತ್ರಿಕೆಯಲ್ಲಿ ಬರುವ ವಿಶೇಷ ಸುದ್ದಿ ಸಂಗ್ರಹಿಸುತ್ತಿದ್ದಾರೆ.

ADVERTISEMENT

ಸಮಾಜದಲ್ಲಿ ಪ್ರತಿಯೊಬ್ಬರ ಯಾಂತ್ರಿಕ ಜೀವನದಲ್ಲಿ ಹವ್ಯಾಸಗಳು ಮನೋವಿಕಾಸಕ್ಕೆ ಸಹಕಾರಿಯಾಗಿವೆ. ಪ್ರಜಾವಾಣಿ ಪತ್ರಿಕೆಯ ಓದುಗರಾದ ವರದರಾಜು ಪತ್ರಿಕೆಯಲ್ಲಿ ಪ್ರಕಟವಾಗುವ ವಿಶೇಷ ವ್ಯಕ್ತಿ ಸ್ಥಳ, ಚಿತ್ರಗಳು, ಗ್ರಹಗಳು, ಆರೋಗ್ಯ, ಕ್ರೀಡೆ, ಇತಿಹಾಸ ಇತ್ಯಾದಿ ವಿಷಯಗಳನ್ನು ಸಂಗ್ರಹಿಸಿದ್ದಾರೆ. ಜತೆಗೆ ನಾಣ್ಯಗಳ ಸಂಗ್ರಹಣೆ ಮತ್ತು ವಿವಿಧ ನಮೂನೆಗಳ ಬೆಂಕಿ ಪೊಟ್ಟಣಗಳ ಸಂಗ್ರಹ ಮಾಡಿರುವುದು ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ಲೇಖನಗಳು. ಪ್ರತಿ ದಿನದ ವಿಶೇಷ ಪುರವಣಿಯಲ್ಲಿನ ಕ್ರೀಡೆ, ವಿಸ್ಮಯ ವಿಹಾರ, ವಿದೇಶಗಳ ಪರಿಚಯ, ಕರ್ನಾಟಕ ದರ್ಶನ, ಪ್ರಾಣಿ ಪ್ರಪಂಚ, ಕೀಟಗಳ ಬಗ್ಗೆ ಪ್ರಕಟವಾಗಿರುವ ವಿಶೇಷ ಚಿತ್ರಗಳನ್ನು ವಿಂಗಡಿಸಿ ಸಂಗ್ರಹಿಸಿದ್ದಾರೆ.

ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಕೆಲವು ವಿದ್ಯಾರ್ಥಿಗಳು ಈ ಲೇಖನ ಸಂಗ್ರಹಗಳನ್ನು ವರದರಾಜು ಅವರಿಂದ ಪಡೆದು ವ್ಯಾಸಂಗ ಮಾಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎದಿರಿಸುವುದು ವಿಶೇಷ.

ಪತ್ರಿಕೆಯಲ್ಲಿ ವಿದೇಶಿ ನಾಣ್ಯಗಳ ಬಗ್ಗೆ ಮಾಹಿತಿ ಓದಿದ ನಂತರ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡರು. ಹಳೆಯ ಕಾಲದ ಕಾಸುಗಳಿಂದ ಹಿಡಿದು ಒಂದು ಪೈಸೆ ಯಿಂದ ₹ 10 ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಇದರ ಜೊತೆಗೆ 20 ದೇಶಗಳ ನಾಣ್ಯಗಳು ಮತ್ತು ಅದರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದಂತಹ ನಾಣ್ಯಗಳ ಮಾಹಿತಿಯನ್ನು ಕಲೆಹಾಕಿದ್ದಾರೆ. ಜತೆಗೆ ಸುಮಾರು 750 ವಿವಿಧ ನಮೂನೆಯ ಬೆಂಕಿ ಪೊಟ್ಟಣಗಳ ಸಂಗ್ರಹ ಕೂಡ ಮಾಡಿದ್ದಾರೆ.

‘ವಿಶೇಷ ಲೇಖನಗಳ ಸಂಗ್ರಹದಿಂದ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ವಿ.ವರದರಾಜು ಹೇಳುತ್ತಾರೆ.

ನಿಲ್ಲದ ಸಂಗ್ರಹದ ಹವ್ಯಾಸ

ಹೊಟ್ಟೆ ಪಾಡಿಗಾಗಿ ಆರಂಭಿಸಿದ್ದ ಕ್ಷೌರಿಕ ಅಂಗಡಿ ಇದೀಗ ಶಾಲಿಮಾರ್ ಬ್ಯೂಟಿ ಕಾರ್ನರ್ ಆಗಿ ಮಾರ್ಪಟ್ಟರೂ ಪತ್ರಿಕೆಯ ಲೇಖನಗಳ ಸಂಗ್ರಹದ ಹವ್ಯಾಸ ಮಾತ್ರ ಇನ್ನೂ ನಿಂತಿಲ್ಲ.

ಪಿಯುಸಿವರೆಗೂ ವಿದ್ಯಾಭ್ಯಾಸ ಪಡೆದುಕೊಂಡಿರುವ ವರದರಾಜು ಕವನಗಳನ್ನು ಬರೆಯಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕಥೆ ಮತ್ತು ಕಾವ್ಯಗಳನ್ನು ಬರೆಯುವ ಆಸೆ ಇದೆ ಎನ್ನುತ್ತಾರೆ ವಿ.ವರದರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.