ADVERTISEMENT

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ

ನ್ಯಾಯಾಧೀಶ ಬಿ.ಮೋಹನ್‌ ಬಾಬು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:53 IST
Last Updated 12 ಏಪ್ರಿಲ್ 2017, 4:53 IST

ಶ್ರೀನಿವಾಸಪುರ: ‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಪೋಷಕರು ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಬೆಂಬಲ ನೀಡಬಾರದು’ ಎಂದು  ಪ್ರಧಾನ ಸಿವಿಲ್‌ ನ್ಯಾಯಾಧೀಶ ಬಿ.ಮೋಹನ್‌ ಬಾಬು ಹೇಳಿದರು.

ಪಟ್ಟಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾನೂನಿನಂತೆ ಮದುವೆಯಾಗಲು ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ವಯಸ್ಸಾಗಿರಬೇಕು. ಈ ವಯೋಮಾದ ಕೆಳಗಿನವರಿಗೆ ಮದುವೆ ಮಾಡುವುದರಿಂದ ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ’ ಎಂದು ಹೇಳಿದರು.

‘ಸಮಾಜದ ಹಿತದೃಷ್ಟಿಯಿಂದ ಬಾಲ್ಯ ವಿವಾಹವನ್ನು ತಡೆಯಬೇಕು. ಎಲ್ಲೇ ಬಾಲ್ಯ ವಿವಾಹ ಮಾಡುವುದು ಕಂಡು ಬಂದಲ್ಲಿ ನಾಗರಿಕರು ಪೊಲೀಸ್‌ ಇಲಾಖೆ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೂರು ನೀಡಬೇಕು. ಪೋಷಕರು ತಮ್ಮ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ.ರಾಘವೇಂದ್ರ ಮಾತನಾಡಿ, ‘ಶಿಕ್ಷಣ ಪಡೆಯುವುದು ಮಗುವಿನ ಹಕ್ಕು. ಶಿಕ್ಷಕರು ಅದನ್ನು ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಪೋಷಕರು ಆರ್‌ಟಿಇ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಸ್ವಲ್ಪ ಮಟ್ಟಿನ ಹೊರೆ ಕಡಿಮೆಯಾಗುತ್ತದೆ’ ಎಂದು ಹೇಳಿದರು.

  ಸಿವಿಲ್‌ ನ್ಯಾಯಾಧೀಶ ಮಹ್ಮದ್‌ ರೋಷನ್‌ ಷಾ, ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲರೆಡ್ಡಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ವೆಂಕಟರಮಣಪ್ಪ, ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಿ.ಈಶ್ವರಮ್ಮ ಈ ಸಂದರ್ಭದಲ್ಲಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.