ADVERTISEMENT

ಮಗು ಸಾವು: ವೈದ್ಯರ ಮೇಲೆ ಹಲ್ಲೆ

ಪೋಷಕರು, ವೈದ್ಯರಿಂದ ಪೊಲೀಸ್‌ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:11 IST
Last Updated 20 ಮಾರ್ಚ್ 2017, 5:11 IST

ಮಾಲೂರು: ಮಗುವಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಆಕ್ರೋಶ ಗೊಂಡ ಮಗುವಿನ ಪೋಷಕರು ವೈದ್ಯ ರಮೇಶ್‌ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ ಪಟ್ಟಣದ ಆದರ್ಶ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಇತ್ತೀಚೆಗೆ ಆದರ್ಶ ನಗರದಲ್ಲಿ  ಆರಂಭಿಸಿದ್ದ  ಡಾ.ರಮೇಶ್  ಕ್ಲಿನಿಕ್‌ಗೆ ತಾಲ್ಲೂಕಿನ ಚಿಕ್ಕ ಇಗ್ಗಲೂರು ಗ್ರಾಮದ ಲಕ್ಷ್ಮಮ್ಮ ಮತ್ತು ವೀರಭದ್ರಪ್ಪ ಎಂಬುವರು  ಎರಡು ತಿಂಗಳ ಮಗುವನ್ನು  ಚಿಕಿತ್ಸೆಗಾಗಿ ಶನಿವಾರ ಮಧ್ಯಾಹ್ನ    ದಾಖಲಿಸಿದ್ದರು. 

ಮಗುವನ್ನು ಪರೀಕ್ಷಿಸಿದ ರಮೇಶ್‌  ಮಗುವಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಆದರೆ, ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿತ್ತು. ಇದರಿಂದ ಆಕ್ರೋಶಗೊಂಡ ಪೋಷಕರು ಕ್ಲಿನಿಕ್‌ಗೆ ಮುತ್ತಿಗೆ ಹಾಕಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ವೈದ್ಯರ  ಮೇಲೆ ಹಲ್ಲೆ ನಡೆಸಿದ್ದಾರೆ.

ವೈದ್ಯ ರಮೇಶ್‌ ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೃತ ಮಗುವಿಗೆ ಪೋಷಕರು ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ಸಲ್ಲಿಸಿದ್ದಾರೆ.   ಈ ಸಂಬಂಧ ಪ್ರಕರಣ ದಾಖಲಾಗಿದೆ.

*
ಪೋಷಕರು ತಾಳ್ಮೆಯಿಂದ ಏನಾಯಿತು ಎಂಬುದನ್ನು  ತಿಳಿದು ನಂತರ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ವೈದ್ಯರ ಮೇಲೆ ಹಲ್ಲೆ ಸರಿಯಲ್ಲ.
-ಪ್ರಭು, ತಾಲ್ಲೂಕು  ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT