ADVERTISEMENT

ಮತದಾನದ ಹಕ್ಕು ಚಲಾಯಿಸಿ

ವಿ ವಿ ಪ್ಯಾಟ್ ಯಂತ್ರದ ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯವತಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 11:40 IST
Last Updated 11 ಏಪ್ರಿಲ್ 2018, 11:40 IST

ಮಾಲೂರು: ವಿಕಲಚೇತನರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಅಲ್ಪಸಂಖ್ಯಾತರು ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಮ್ಮ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಸತ್ಯವತಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಚುನಾವಣೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರಲ್ಲಿ ಜಾಗೃತಿ ಮತ್ತು ವಿವಿಪ್ಯಾಟ್ ಯಂತ್ರದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯ ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು
ಎಂದರು.

ADVERTISEMENT

ಮತದಾನದ ಬಗ್ಗೆ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಬಾರಿಯ ಚುನಾವಣೆಯಲ್ಲಿ ತಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುವುದನ್ನು ಖಾತ್ರಿಪಡಿಸಲು ಹೊಸದಾಗಿ ವಿವಿಪ್ಯಾಟ್ ಯಂತ್ರ ಅಳವಡಿಸಲಾಗುವುದು. ಬ್ಯಾಲೆಟ್ ಯುನಿಟ್‍ನಲ್ಲಿ ಬಟನ್ ಒತ್ತಿದ ತಕ್ಷಣ ವಿವಿಪ್ಯಾಟ್ ಯಂತ್ರದ ಕಿಂಡಿಯಲ್ಲಿ ತಾವು ಚಲಾಯಿಸಿರುವ ಅಭ್ಯರ್ಥಿಯ ಕ್ರಮಸಂಖ್ಯೆ, ಚಿನ್ನೆ ಇತ್ಯಾದಿ ವಿವರಗಳು ಮೂಡಿ ಬರುವುದು. ಏಳು ಸೆಕೆಂಡುಗಳ ಕಾಲ ನೋಡಲು ಅವಕಾಶವಿದೆ ಬಳಿಕ ಆ ಕಾಗದದ ಸ್ಲಿಪ್ ವಿವಿ ಪ್ಯಾಟ್ ಯಂತ್ರದ ಒಳಗೆ ಬೀಳುವುದು. ಆದರೆ ಈ ಸ್ಲಿಪ್ ಪಡೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿವಿಪ್ಯಾಟ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಪ್ರಾತ್ಯಕ್ಷಿತೆ ನಡೆಸಲಾಗುತ್ತಿದೆ. ಇದಕ್ಕಾಗಿ ತಂಡ ರಚಿಸಲಾಗಿದೆ. ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ಬಲಪಡಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ ಅಳವಡಿಸಲಾಗುತ್ತಿರುವ ವಿವಿಪ್ಯಾಟ್ ಯಂತ್ರದ ಬಗ್ಗೆ ಜಿಲ್ಲಾಧಿಕಾರಿ ಅವರು ನೆರೆದಿದ್ದ ಸಾರ್ವಜನಿಕರಲ್ಲಿ ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು.

ಪ್ರಾಯೋಗಿಕವಾಗಿ ಮತಯಂತ್ರದಲ್ಲಿ ಮತ ಚಲಾಯಿಸಿ ವಿವಿಪ್ಯಾಟ್ ಯಂತ್ರದಲ್ಲಿ ತಾವು ಚಲಾಯಿಸಿರುವ ಅಭ್ಯರ್ಥಿಗೆ ಮತ ಹಾಕಿರುವುದನ್ನು ನಾಗರಿಕರು ಈ ಸಂದರ್ಭದಲ್ಲಿ ಖಾತ್ರಿಪಡಿಸಿಕೊಂಡರು. ಇದೇ ಸಂದರ್ಭದಲ್ಲಿ ಮತದಾರರಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ , ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ನಾಗವೇಣಿ ,ಚುನವಣಾ ಅಧಿಕಾರಿ ಕೃಷ್ಣಮೂರ್ತಿ, ಎಸ್ ವಿಇಇಪಿ ಅಧಿಕಾರಿಗಳಾದ ಸಿ.ಆರ್.ಮಂಜುನಾಥ್, ಮೃತ್ಯುಂಜಯ, ಶಶಿಕಲಾ, ಸಿಡಿಪಿಓ ಜಗದೀಶ್, ಉಪನ್ಯಾಸಕ ತಿಲಗಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.