ADVERTISEMENT

ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾದ ಕಾರ್ಮಿಕರು

ಶೇ 26 ರಷ್ಟು ಷೇರು ಮಾರಾಟ: ಷೇರು ವಿನಿಮಯ ಕೇಂದ್ರಗಳಿಗೆ ಬೆಮಲ್‌ನಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:34 IST
Last Updated 9 ಜನವರಿ 2017, 9:34 IST

ಕೆಜಿಎಫ್: ಕಾರ್ಮಿಕರ ತೀವ್ರ ವಿರೋಧದ ನಡುವೆಯೇ ಕೇಂದ್ರ ಸರ್ಕಾರ ಬೆಮಲ್‌ನಲ್ಲಿನ ತನ್ನ ಷೇರು ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಜಾರಿ ಮಾಡಿದ್ದು ಕಾರ್ಮಿಕರನ್ನು ತಲ್ಲಣಗೊಳಿಸಿದೆ. ಈಗ ಪುನಃ ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾರ್ಮಿಕರು ಸಜ್ಜಾಗಿದ್ದಾರೆ.

ಶೇ 26 ರಷ್ಟು ಷೇರುಗಳನ್ನು ಮಾರಾಟ ಮಾಡಲು ದೇಶದ ವಿವಿಧ ಷೇರು ವಿನಿಮಯ ಕೇಂದ್ರಗಳಿಗೆ ಬೆಮಲ್‌ ಜ. 6 ರಂದು ಪತ್ರ ಬರೆದಿದೆ. ಈ ಪತ್ರದಲ್ಲಿ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಬೆಮಲ್‌ನ ಶೇ 54. 03ರ ಪೈಕಿ ಶೇ 26 ರಷ್ಟು ಈಕ್ವಿಟಿ ಷೇರುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದನ್ನು ಉಲ್ಲೇಖಿಸಲಾಗಿದೆ.

ಪ್ರಸ್ತುತ ಬೆಮಲ್‌ನ ಒಂದು ಷೇರಿನ ಬೆಲೆ ₹ 999.50 ಪೈಸೆ ಇದೆ. ಷೇರುಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ₹ 1 ಸಾವಿರ ದೊರೆಯಲಿದೆ. ಆಗ ಬೆಮಲ್‌ನಲ್ಲಿ ಕೇಂದ್ರದ ಷೇರಿನ ಪ್ರಮಾಣ ಶೇ 28.03 ಕ್ಕೆ ಇಳಿಯಲಿದೆ.

ಬೆಮಲ್‌ ಷೇರು ವಿತರಣೆಗೆ ಸೂಕ್ತ ಖರೀದಿದಾರರನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಬೆಮಲ್‌ ಪತ್ರದಲ್ಲಿ ತಿಳಿಸಿದೆ. ಸರ್ಕಾರದ ನಿರ್ಧಾರದಿಂದ ಆತಂಕಗೊಂಡಿದ್ದ ಬೆಮಲ್‌ ಕೆಜಿಎಫ್‌, ಮೈಸೂರು, ಬೆಂಗಳೂರು ಮತ್ತು ಪಾಲಕ್ಕಾಡ್‌ ಕೇಂದ್ರಗಳ ಕಾರ್ಮಿಕರು ಸರಣಿ ಹೋರಾಟ ನಡೆಸಿದ್ದರು.

ಕಾರ್ಮಿಕರು ಕೇಂದ್ರ ಸಚಿವ ಅನಂತಕುಮಾರ್ ನೇತೃತ್ವದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ನಿಯೋಗ ಸಹ ಕೇಂದ್ರ ಸಚಿವರನ್ನು ಮತ್ತು ರಾಜ್ಯದ ಹಲವು ಸಂಸದರನ್ನು ಭೇಟಿ ಮಾಡಿ ಬೆಮಲ್‌ನಲ್ಲಿ ಷೇರು ಬಂಡವಾಳವ ಹಿಂತೆಗೆದುಕೊಳ್ಳಬಾರದು ಎಂದು ಮನವಿ ಮಾಡಿತ್ತು.

ವಾರ್ಷಿಕ ₹ 3500 ಕೋಟಿ ರೂಪಾಯಿ ವಹಿವಾಟು ನಡೆಸುವ ಬೆಮಲ್‌ ಕೇಂದ್ರ ರಕ್ಷಣಾ ಖಾತೆಯಡಿ ಕೆಲಸ ಮಾಡುತ್ತಿದೆ.   ಭಾರತೀಯ ಸೈನ್ಯಕ್ಕೆ ಟೆಟ್ರಾ ವಾಹನ ಸೇರಿದಂತೆ ಹಲವು ಬಗೆಯ ಯಂತ್ರೋಪಕರಣಗಳನ್ನು ಸಿದ್ದಗೊಳಿಸುತ್ತದೆ.

ಕೋಲಾರ ಜಿಲ್ಲೆಯಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎರಡು ಉದ್ದಿಮೆಗಳು ಕೆಜಿಎಫ್ ನಗರದಲ್ಲಿ ಸ್ಥಾಪಿತವಾಗಿದ್ದವು.  ಇವುಗಳಲ್ಲಿ ಬಿಜಿಎಂಎಲ್‌ ಮುಚ್ಚಿದ್ದು, 1964 ರಲ್ಲಿ ಆಗಿನ ಕೇಂದ್ರ ಸಚಿವ ಎಂ.ವಿ.ಕೃಷ್ಣಪ್ಪ ಅವರ ಒತ್ತಾಸೆಯಿಂದ ಸ್ಥಾಪನೆಗೊಂಡಿದ್ದ ಬೆಮಲ್‌ ಸಹ ಖಾಸಗೀಕರಣದತ್ತ ಮುಖಮಾಡಿರುವುದು ಕಾರ್ಮಿಕರಷ್ಟೇ ಅಲ್ಲ ನಾಗರಿಕರಲ್ಲೂ ಆತಂಕ ಉಂಟು ಮಾಡಿದೆ.

ಕೆಜಿಎಫ್‌ ಕೇಂದ್ರದಲ್ಲಿ ರೈಲ್ವೆ ಕೋಚ್‌ಗಳು, ಹೆವಿ ಫ್ಯಾಬ್ರಿಕೇಷನ್‌, ಹೈಡ್ರಾಲಿಕ್‌ ಮತ್ತು ಪವರ್‌ಲೈನ್‌ ವಿಭಾಗವಿದೆ. ಮೈಸೂರು ಕೇಂದ್ರದಲ್ಲಿ ಟ್ರಕ್‌ ಮತ್ತು ಎಂಜಿನ್‌ ವಿಭಾಗ, ಬೆಂಗಳೂರಿನಲ್ಲಿ ರೈಲು ಮತ್ತು ಮೆಟ್ರೊ ವಿಭಾಗಗಳು ಕೆಲಸ ಮಾಡುತ್ತಿವೆ. ಕೇರಳದ ಪಾಲಕ್ಕಾಡ್‌ ಮತ್ತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲೂ ಘಟಕ ಇದೆ.

ಇಂದು ಹೋರಾಟ
ಷೇರು ಮಾರಾಟ ಖಂಡಿಸಿ ಬೆಮಲ್‌ ಕಾರ್ಮಿಕ ಸಂಘಟನೆಗಳು ಸಂಯುಕ್ತವಾಗಿ ಹೋರಾಟ ನಡೆಸಲಿವೆ. ಜ.9 ರಂದು ಬೆಂಗಳೂರಿನಲ್ಲಿ ಹೋರಾಟ ಆರಂಭವಾಗುತ್ತದೆ. 13 ರಂದು ಕೆಜಿಎಫ್‌ನಲ್ಲಿ ಪ್ರತಿಭಟನೆ ನಡೆಸುತ್ತೇವೆ. ನಮಗೆ ಭರವಸೆ ನೀಡಿದ್ದ ಕೇಂದ್ರ ಸಚಿವರನ್ನು ಮತ್ತೆ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ.
–ಆಂಜನೇಯರೆಡ್ಡಿ, ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.