ADVERTISEMENT

ಮಾರ್ವೆ ಮೀನು ಸಾಕಾಣಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:17 IST
Last Updated 11 ಜನವರಿ 2017, 11:17 IST
ನಿಷೇಧಿತ ಮಾರ್ವೆ ಮೀನು ಸಾಕಾಣೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಮೀನುಗಳ ಸಮೇತ ಪ್ರತಿಭಟನೆ ನಡೆಸಿದರು.
ನಿಷೇಧಿತ ಮಾರ್ವೆ ಮೀನು ಸಾಕಾಣೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಮೀನುಗಳ ಸಮೇತ ಪ್ರತಿಭಟನೆ ನಡೆಸಿದರು.   

ಕೋಲಾರ: ಮಾರ್ವೆ (ಆಫ್ರಿಕನ್ ಕ್ಯಾಟ್ ಫಿಷ್) ಮೀನು ಸಾಕಾಣೆ ಮಾಡು ತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಮಂಗಳವಾರ ಮೀನುಗಳ ಸಮೇತ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಘಟಕದ ಕೆ.ನಾರಾಯಣಗೌಡ ಮಾತನಾಡಿ, ‘ಮಾರ್ವೆ ಮೀನನ್ನು ಸಾಕಾಣಿಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಆದರೆ ಜಿಲ್ಲೆಯಲ್ಲಿ ಕೆಲವರು ರಾಜಾರೋಷವಾಗಿ ಸಾಕಾಣಿಕೆ ಮಾಡುತ್ತಿದ್ದರೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ’ ಎಂದು ದೂರಿದರು.
ಮಾರ್ವೆ ಮೀನು ಸೇವನೆಯಿಂದ ಕ್ಯಾನ್ಸರ್, ಕ್ಷಯಾ, ಡೆಂಗಿ ಮತ್ತಿತರ ಕಾಯಿಲೆಗಳು ಬರುತ್ತವೆ ಎಂದು ತಜ್ಞರು ಖಚಿತಪಡಿಸಿದ್ದಾರೆ ಎಂದರು.

ತಾಲ್ಲೂಕಿನ ಕ್ಯಾಲನೂರು ಗ್ರಾಮದ ರೈತನೊಬ್ಬ ಹತ್ತು ತೊಟ್ಟಿಗಳನ್ನು ನಿರ್ಮಿಸಿ ಮಾರ್ವೆ ಮೀನಿನ ಮರಿಗಳನ್ನು  ಬಾಂಗ್ಲಾದಿಂದ ತಂದು ಸಾಕುತ್ತಿದ್ದಾನೆ. ಈ ಮೀನುಗಳಿಗೆ ಆಹಾರವಾಗಿ ಕೋಳಿಗಳ ತ್ಯಾಜ್ಯ, ರೇಷ್ಮೆ ಹುಳುಗಳನ್ನು ನೀಡುತ್ತಿದ್ದಾರೆ. ಇದರಿಂದ ಸುತ್ತಮುತ್ತ ನಾಯಿಗಳ ಹಾವಳಿ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡಿದ ನಿದರ್ಶನಗಳು ಇವೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ ಕಾಯ್ದೆ 1986 ಸೆಕ್ಷನ್-5ರ ಅನ್ವಯ ಮಾರ್ವೆ ಸಾಕಾಣಿಕೆ ಮತ್ತು ಮಾರಾಟ ಮಾಡಿದರೆ ಆರೋಪಿಗೆ 5 ವರ್ಷ ಸಜೆ ಹಾಗೂ ₹ 1 ಲಕ್ಷ ದಂಡ ವಿಧಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಅಧಿಕಾರಿಗಳು ಮಾತ್ರ ಒತ್ತಡಕ್ಕೆ ಮಣಿದು, ಹಣದ ಆಸೆಯಿಂದ ಸಾಕಾಣಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಫಾರುಕ್ ಪಾಷಾ, ರಾಮು, ಶಿವಣ್ಣ, ಕೃಷ್ಣೇಗೌಡ, ಪುರುಷೋತ್ತಮ್, ಪ್ರತಾಪ್, ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.