ADVERTISEMENT

ಮಾವಿನ ಪಟ್ಟಣದ ಬಾವಲಿಗಳು

ಆರ್.ಚೌಡರೆಡ್ಡಿ
Published 19 ನವೆಂಬರ್ 2017, 6:33 IST
Last Updated 19 ನವೆಂಬರ್ 2017, 6:33 IST
ಶ್ರೀನಿವಾಸಪರ ಪೊಲೀಸ್‌ ಠಾಣೆ ಸಮೀಪದ ಮರಗಳಲ್ಲಿ ಕೊಂಬೆಗಳಿಗೆ ಜೋತು ಬಿದ್ದಿರುವ ಬಾವಲಿಗಳು
ಶ್ರೀನಿವಾಸಪರ ಪೊಲೀಸ್‌ ಠಾಣೆ ಸಮೀಪದ ಮರಗಳಲ್ಲಿ ಕೊಂಬೆಗಳಿಗೆ ಜೋತು ಬಿದ್ದಿರುವ ಬಾವಲಿಗಳು   

ಶ್ರೀನಿವಾಸಪುರ ಬಸ್‌ ನಿಲ್ದಾಣದಲ್ಲಿ ನಿಂತು ಪೊಲೀಸ್‌ ಠಾಣೆ ಕಡೆ ದೃಷ್ಟಿ ಹಾಯಿಸಿದರೆ, ಅಲ್ಲಿನ ಮರಗಳಲ್ಲಿ ಕೊಂಬೆಗಳಿಗೆ ಜೋತು ಬಿದ್ದಿರುವ ಸಾವಿರಾರು ಬಾವಲಿಗಳ ದರ್ಶನವಾಗುತ್ತದೆ.

ಈ ಸ್ಥಳ ದಶಕಗಳಿಂದ ಬಾವಲಿ ನೆಲೆಯಾಗಿ ಪರಿಣಮಿಸಿದೆ. ಪುರಸಭೆ ಕಚೇರಿ ಎದುರಿನ ಮರಗಳಲ್ಲೂ ಸಾವಿರಾರು ಬಾವಲಿಗಳು ನೆಲೆಸಿದ್ದವು. ಆದರೆ ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಈಚೆಗೆ ಮರಗಳನ್ನು ಕಡಿಯಲಾಯಿತು. ಇದರಿಂದ ಬಾವಲಿಗಳು ನೆಲೆ ಕಳೆದುಕೊಂಡು, ಪೊಲೀಸ್‌ ಠಾಣೆ ಸಮೀಪದ ಮರಗಳಿಗೆ ಹಾರಿದವು. ಈಗ ಅಲ್ಲಿನ ನೀಲಗಿರಿ ಹಾಗೂ ಮಳೆ ಮರಗಳು ಸಹ ದೊಡ್ಡ ಸಂಖ್ಯೆಯಲ್ಲಿರುವ ಬಾವಲಿಗಳಿಗೆ ಸಾಕಾಗುತ್ತಿಲ್ಲ.

ಕೊಂಬೆ, ರೆಂಬೆಗಳಿಗೆ ತಲೆಕೆಳಗಾಗಿ ಜೋತು ಬಿದ್ದಿರುವ ಬಾವಲಿಗಳು ಕತ್ತಲು ಆವರಿಸುತ್ತಿದ್ದ ಹಾಗೆ ಮೈಕೊಡವಿ ಎದ್ದು, ಮೇವಿಗಾಗಿ ದಿಕ್ಕು ದಿಕ್ಕಿಗೆ ಹಾರುತ್ತವೆ. ಗುಂಪು ಗುಂಪಾಗಿ ಹಾರುವ ಬಾವಲಿಗಳ ದೃಶ್ಯ ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ. ಪಟ್ಟಣ ವಾಸಿಗಳು ಸಂಜೆ ಹೊತ್ತು ಈ ಸುಂದರ ನೋಟ ನೋಡಲು ಕಾದು ಕುಳಿತಿರುತ್ತಾರೆ.

ADVERTISEMENT

ಅತ್ಯಂತ ಹತ್ತಿರದಲ್ಲಿ ಹಾಗೂ ಹೆಚ್ಚು ಎತ್ತರವಿಲ್ಲದ ಮರಗಳಲ್ಲಿ ವಾಸಿಸುವ ಇಲ್ಲಿನ ಬಾವಲಿ ನೋಡಲು ಜನರು ಬಂದು ಹೋಗುತ್ತಾರೆ. ಅಲ್ಲದೆ ಬಾವಲಿಗಳ ಬದುಕಿನ ಬಗ್ಗೆ ಅಧ್ಯಯನ ಮಾಡುವವರು ಸಹ ಬಂದು ಬರುತ್ತಾರೆ. ಮರಗಳ ಕೆಳಗೆ ಪೊಲೀಸ್‌ ಠಾಣೆ ಇರುವುದರಿಂದ ಹಾಗೂ ಹಗಲು ಹೊತ್ತಿನಲ್ಲಿ ಬೇರೆ ಬೇರೆ ಕಚೇರಿಗಳಿಗೆ ಬರುವ ಜನಜಂಗುಳಿ ಇರುವುದರಿಂದ ಬಾವಲಿಗಳ ಸುರಕ್ಷತೆಗೆ ತೊಂದರೆಯಿಲ್ಲ.

ರಾತ್ರಿ ಹೊತ್ತಿನಲ್ಲಿ ಮೇವಿಗಾಗಿ ಹೋಗುವ ಎಲ್ಲ ಬಾವಲಿಗಳೂ, ಬೆಳಕು ಹರಿಯುವ ಮುನ್ನ ತಮ್ಮ ನೆಲೆಗೆ ಹಿಂದಿರುಗುತ್ತವೆ ಎಂದು ಹೇಳಲಾಗದು. ಬಾವಲಿ ಮಾಂಸದ ರುಚಿಗೆ ಮಾರುಹೋದವರು ಹಾಗೂ ನಾಟಿ ಔಷಧ ತಯಾರಿಸುವ ವೈದ್ಯರು ಇವುಗಳ ಜೀವ ತೆಗೆಯುವುದುಂಟು. ಹತ್ತಿ, ಆಲದಂಥ ಮರಗಳಲ್ಲಿ ಹಣ್ಣಿರುವ ಕಾಲದಲ್ಲಿ ಬಲೆ ಹಾಕುತ್ತಾರೆ. ಹಣ್ಣಿನ ಆಸೆಗೆ ಬರುವ ಬಾವಲಿಗಳು ಬಲೆಯಲ್ಲಿ ಬಿದ್ದು ಬೇಟೆಗಾರರ ಪಾಲಾಗುತ್ತವೆ.

ಮಾವಿನ ಪಟ್ಟಣದ ವಿಶೇಷ ಆಕರ್ಷಣೆಯಾದ ಹಾರಾಡುವ ಸಸ್ತನಿಗಳು ಇಲ್ಲಿನ ನೆಲೆ ಬಿಟ್ಟು ಬೇರೆಡೆಗೆ ವಲಸೆ ಹೋಗದಂತೆ ತಡೆಯಬೇಕಾದರೆ, ಅವು ನಿರಾತಂಕವಾಗಿ ಜೀವಿಸುವ ವಾತಾವರಣ ಕಲ್ಪಿಸಬೇಕು. ಬಾವಲಿ ಹಂತಕರರನ್ನು ನಿಯಂತ್ರಿಸಲು ಗ್ರಾಮೀಣ ಪ್ರದೇಶದ ಜನರು ಸಹಕರಿಸಬೇಕು. ಅರಣ್ಯ ಇಲಾಖೆಯೂ ಈ ಬಗ್ಗೆ ಎಚ್ಚರ ವಹಿಸಿದರೆ ಈ ಜೀವಿಗಳ ಜೀವಕ್ಕೆ ಅಪಾಯ ಇರುವುದಿಲ್ಲ.

ಹಣ್ಣಿನ ಮರ ಬೆಳೆಸಿ
ಬೇಟೆಗಾರರ ಭಯದಿಂದಲೇ ಈ ಬಾವಲಿಗಳು ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿವೆ. ಆದರೆ ಅಲ್ಲಿರುವ ಮರಗಳು ಸಾಕಾಗುತ್ತಿಲ್ಲ. ಅರಣ್ಯ ಇಲಾಖೆ ಬಾವಲಿಗಳ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಹಣ್ಣಿನ ಮರ ಬೆಳೆಸಬೇಕು ಎಂದು ಪರಿಸರವಾದಿ ರಾಜಾರೆಡ್ಡಿ ಹೇಳಿದರು.

ಮರಗಳ ಸಮೀಪದ ರಸ್ತೆಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.