ADVERTISEMENT

ಮುಂಗಾರಿನ ಮೊದಲೆ ಕಣಜ ಸೇರಲಿರುವ ರಾಗಿ, ಭತ್ತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 10:10 IST
Last Updated 7 ಏಪ್ರಿಲ್ 2017, 10:10 IST

ಮುಳಬಾಗಿಲು: ಎಲ್ಲೆಡೆ ಬರಗಾಲ ಆವರಿಸಿದ್ದರೂ ಸಹ ಗ್ರಾಮೀಣ ಭಾಗದ ಕೆಲ ರೈತರು ತಮ್ಮ ಕೊಳವೆ ಬಾವಿಗಳ ಬಳಿ ವಾಡಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.

ಕೊಳವೆ ಬಾವಿಯಲ್ಲಿ ಬರುವ ಅಲ್ಪಸ್ವಲ್ಪ ನೀರಿನಲ್ಲಿ ಆದಾಯ ತರುವ ಬೆಳೆಗಿಂತ ಪ್ರತಿ ವರ್ಷ ಬೆಳೆಯುವ ವಾಡಿಕೆ ಬೆಳೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಹಳ್ಳಿ ಜನರು ತಮ್ಮ ಜೀವನೋಪಾಯಕ್ಕೆ ಬೇಕಾದ ಅಗತ್ಯವಾದ ವಸ್ತು ಮತ್ತು ಬೆಳೆಗಳನ್ನು ತೋಟದಲ್ಲಿ ಬೆಳೆದುಕೊಳ್ಳುತ್ತಾರೆ. ಅವುಗಳಲ್ಲಿ ರಾಗಿ, ಭತ್ತ, ಅವರೆ, ಅಲಸಂದಿ, ಸಾಸುವೆ, ಬಿಳಿ ಜೋಳ, ಸಜ್ಜೆ, ಹುಚ್ಚೆಳ್ಳು, ನಾಟಿ ಈರುಳ್ಳಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಬಹುತೇಕ ಕೆರೆ– ಕುಂಟೆಗಳು ಬತ್ತಿ ಹೋಗಿವೆ. ಕೊಳವೆ ಬಾವಿಗಳ ಅಂತರ್ಜಲದ ಮಟ್ಟ 2 ಸಾವಿರ ಅಡಿಗಳಿಗೆ ಕುಸಿದಿದೆ. ಇಷ್ಟಾದರೂ  ಸಹ ರೈತರು ಕೊಳವೆ ಬಾವಿಗಳ ಮೂಲಕ ನೀರನ್ನು ಮೇಲೆತ್ತುವ ನಿರೀಕ್ಷೆಯಲ್ಲಿ ಮತ್ತಷ್ಟು ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗುತ್ತಿದ್ದಾರೆ. ಇದರಿಂದ ನೀರು ಬಾರದ ಕೊಳವೆ ಬಾವಿಗಳ ಸಂಖ್ಯೆಯೆ ಅಧಿಕವಾಗಿ ಕಾಣಿಸುತ್ತವೆ.

ADVERTISEMENT

ಇತ್ತೀಚೆಗೆ ಮುಂಗಾರಿನಲ್ಲಿ ಮಳೆಯಾಗದ ಕಾರಣ ಹೊಲ– ಗದ್ದೆಗಳಲ್ಲಿ ಭತ್ತ ಹಾಗೂ ರಾಗಿ ಬೆಳೆಗಳು ಬೆಳೆಯಲು ಆಗಲಿಲ್ಲ. ಇನ್ನೂ ಹಲವೆಡೆ ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲ. ಮಳೆ ಇಲ್ಲದೆ ಹೊಲದಲ್ಲಿಯೆ ಕೆಲ ಬೆಳೆಗಳೆಲ್ಲವೂ ಒಣಗಿ ಹೋಗಿದ್ದವು. ಆದ್ದರಿಂದ ಗ್ರಾಮೀಣ ಭಾಗದ ರೈತರು ಮನೆ ಬಳಕೆಗಾದರೂ ರಾಗಿ, ಭತ್ತವನ್ನು ಬೆಳೆದುಕೊಳ್ಳುವ ವಾಡಿಕೆಯನ್ನು ಮುಂದುವರಿಸಿದ್ದಾರೆ ಎನ್ನುತ್ತಾರೆ ಶೆಟ್ಟಿ ಬನಕನಹಳ್ಳಿ ಶ್ರೀರಾಮ.

ಮರುಕೂಳೆ ನೆಲ್ಲು: ಭತ್ತವನ್ನು ನಾಟಿ ಮಾಡಿ, ಮೊದಲ ಫಸಲಿನ ಕೊಯ್ಲಿನ ನಂತರ ಚಿಗೊರೆಡೆದು ಮತ್ತೆ ಬರುವ ಭತ್ತವನ್ನು ಮರುಕೂಳೆ ನೆಲ್ಲು ಎಂಬುದಾಗಿ ಕರೆಯಲಾಗುತ್ತದೆ. ಈ ನೆಲ್ಲು ಸಿಗುವುದು ತುಂಬಾ ಅಪರೂಪ. ಅಲ್ಲದೆ ಈ ಭತ್ತದೊಳಗಿನ ಅಕ್ಕಿ ಕಾಳಿನ ಬಳಕೆ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದರಿಂದ ಮರುಕೂಳೆ ಭತ್ತಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ.

ಮರುಕೂಳೆ ನೆಲ್ಲನ್ನು ಹುಡುಕಿಕೊಂಡು ಕೆಲವೊಮ್ಮೆ ದೂರದ ಊರುಗಳಿಗೆ ಹೋದ ಸಂದರ್ಭಗಳಿವೆ. ಪೂಜಾ ಕಾರ್ಯ ಹಾಗೂ ವಿವಿಧ ಬಗೆಯ ನಾಟಿ ಔಷಧ ತಯಾರಿಸಲು ಮರುಕೂಳೆ ನೆಲ್ಲನ್ನು ಬಳಸಲಾಗುತ್ತದೆ. ಇದರಿಂದ ಮನೆಯಲ್ಲಿನ ದೊಡ್ಡ ಮಗ ಮರುಕೂಳೆ ನೆಲ್ಲಿನಲ್ಲಿ ತಯಾರಿಸಿದ ಅನ್ನ ತಿನ್ನಬಾರದೆಂಬ ಪ್ರತೀತಿ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜಾರಿಯಲ್ಲಿದೆ ಎಂದು ಅಸಲಿ ಅತ್ತಿಕುಂಟೆ ಗ್ರಾಮದ ನಿವಾಸಿ ನಂಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

*

–ಎಸ್.ಸುಬ್ರಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.