ADVERTISEMENT

ಮುಖ್ಯಮಂತ್ರಿಗೆ ದೂರು ಕೊಡುತ್ತೇನೆ: ಆಂಜಿನಪ್ಪ

ತಾ.ಪಂ ಅಧ್ಯಕ್ಷ– ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:16 IST
Last Updated 3 ಫೆಬ್ರುವರಿ 2017, 7:16 IST
ಮುಖ್ಯಮಂತ್ರಿಗೆ ದೂರು ಕೊಡುತ್ತೇನೆ: ಆಂಜಿನಪ್ಪ
ಮುಖ್ಯಮಂತ್ರಿಗೆ ದೂರು ಕೊಡುತ್ತೇನೆ: ಆಂಜಿನಪ್ಪ   

ಕೋಲಾರ: ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟಂತೆ ಅಧಿಕಾರಿ ವರ್ಗ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಆಂಜಿನಪ್ಪ ಅವರು ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅಧಿಕಾರಿ ವರ್ಗದ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲು ಮುಂದಾಗಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಕಾರ್ಯದರ್ಶಿಗಳ ಸಭೆ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ನಿಯೋಜನೆ, ಪಿಡಿಒ ಹುದ್ದೆಗಳ ಭರ್ತಿ ವಿಷಯವಾಗಿ ಅಧಿಕಾರಿ ವರ್ಗ ಹಾಗೂ ತಾ.ಪಂ ಅಧ್ಯಕ್ಷರ ನಡುವೆ ತಿಕ್ಕಾಟ ನಡೆಯುತ್ತಿದ್ದು, ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.

ಜಿ.ಪಂ ಸಿಇಒ ಬಿ.ಬಿ.ಕಾವೇರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಇಒ) ಚಂದ್ರಪ್ಪ ಅವರು ಪಿಡಿಒ ಮತ್ತು ಗ್ರಾ.ಪಂ ಕಾರ್ಯದರ್ಶಿಗಳ ಸಭೆಗೆ ತಮಗೆ ಆಹ್ವಾನ ನೀಡದೆ ಶಿಷ್ಠಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಆಂಜಿನಪ್ಪ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್‌.ಕೆ.ಪಾಟೀಲ್‌ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚಾಯತ್‌ರಾಜ್‌ ಕಾಯ್ದೆ ಪ್ರಕಾರ ತಾ.ಪಂ ಅಧ್ಯಕ್ಷರು ಕಾರ್ಯ ನಿರ್ವಹಣಾ ಮುಖ್ಯಸ್ಥರಾಗಿರುತ್ತಾರೆ. ಅಧ್ಯಕ್ಷರನ್ನು ಸಭೆಗೆ ಕರೆಯುವುದು ಶಿಷ್ಠಾಚಾರ. ಆದರೆ, ಸಿಇಒ ಕಾವೇರಿ ಮತ್ತು ಇಒ ಚಂದ್ರಪ್ಪ ನನ್ನನ್ನು ಯಾವುದೇ ಸಭೆಗೆ ಆಹ್ವಾನಿಸುತ್ತಿಲ್ಲ. ಅವರು ಮೂರ್‌್ನಾಲ್ಕು ತಿಂಗಳುಗಳಿಂದ ಇದೇ ರೀತಿ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

ಪ್ರತಿ ಬಾರಿ ಸಭೆ ನಡೆದಾಗ ತಾನು ಕಚೇರಿಯಲ್ಲೇ ಹಾಜರಿದ್ದರೂ ಸಿಇಒ ಹಾಗೂ ಇಒ ಸಭೆಗೆ ಕರೆಯದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ತಾಲ್ಲೂಕಿನ 4 ಲಕ್ಷ ಜನರನ್ನು ಪ್ರತಿನಿಧಿಸುವ ತನ್ನನ್ನು ಸಭೆಗೆ ಕರೆಯಬೇಕೆಂಬ ಕನಿಷ್ಠ ಸೌಜನ್ಯವೂ ಅವರಿಗೆ ಇಲ್ಲ. ಅವರ ಕೈ ಕೆಳಗಿನ ಅಧಿಕಾರಿಗಳಾದ ಪಿಡಿಒ ಮತ್ತು ಗ್ರಾ.ಪಂ ಕಾರ್ಯದರ್ಶಿಗಳು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಇಒ ಅಣತಿಯಂತೆ ನಡೆದುಕೊಳ್ಳುತ್ತಿರುವ ಕಚೇರಿ ಸಿಬ್ಬಂದಿ ತನ್ನ ಗಮನಕ್ಕೆ ತರದೆ ಹಲವು ಬಿಲ್‌ಗಳನ್ನು ಮಂಜೂರು ಮಾಡಿದ್ದಾರೆ. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಬಾಲಾಜಿ ಅವರನ್ನು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜಿಸುವಂತೆ ಸಿಇಒಗೆ ಮನವಿ ಮಾಡಿದ್ದೆ. ಆದರೆ, ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಅವರು ಸೌಜನ್ಯಕ್ಕೂ ತನ್ನ ಜತೆ ಚರ್ಚಿಸದೆ ಶಿಕ್ಷಣ ಇಲಾಖೆಯ ಸಹಾಯಕ ಸಮನ್ವಯಾಧಿಕಾರಿ ಮೈಲೇರಪ್ಪ ಅವರನ್ನು ಆ ಹುದ್ದೆಗೆ ನಿಯೋಜಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಅರಾಭಿಕೊತ್ತನೂರು, ವಡಗೂರು ಮತ್ತು ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಪಿಡಿಒ ಹುದ್ದೆಗಳಿಗೆ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಸಿಇಒಗೆ ಪತ್ರ ಬರೆದಿದ್ದೆ. ಆದರೆ, ಆ ಪತ್ರವೇ ಕಾಣೆಯಾಗಿದೆ. ಸಿಇಒ ಅವರನ್ನು ಭೇಟಿಯಾಗಲು ತಾನು ಜನಸಾಮಾನ್ಯರಂತೆ ಪೂರ್ವಾನುಮತಿ ಪಡೆದು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ ಎಂದರು.

**

ಧರಣಿ ಕೂರುತ್ತೇನೆ
ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೆನ್ನಿಗಿದ್ದಾರೆ ಎಂದು ಅಧಿಕಾರಿಗಳು ದರ್ಪ ತೋರುತ್ತಿದ್ದಾರೆ. ಅಧಿಕಾರಿಗಳ ಅನುಕಂಪ ಬೇಡ. ಬದಲಿಗೆ ಗೌರವ ಕೊಟ್ಟರೆ ಸಾಕು. ಸಿಇಒ, ಇಒ ಹಾಗೂ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಸಿಇಒ ಕಚೇರಿ ಬಾಗಿಲಲ್ಲೇ ಧರಣಿ ಕೂರುತ್ತೇನೆ.
–ಎಂ.ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ

ADVERTISEMENT

***

ಕರೆಯುವ ಅಗತ್ಯವಿಲ್ಲ
ಪ್ರತಿ ತಿಂಗಳು ಪಿಡಿಒ ಹಾಗೂ ಗ್ರಾ.ಪಂ ಕಾರ್ಯದರ್ಶಿಗಳ ಸಭೆ ನಡೆಸುತ್ತಿದ್ದೇನೆ. ಇದು ಸಂಪೂರ್ಣ ಅಧಿಕಾರಿಗಳ ಸಭೆ. ಹೀಗಾಗಿ ತಾ.ಪಂ ಅಧ್ಯಕ್ಷರನ್ನು ಸಭೆಗೆ ಕರೆಯುವ ಅಗತ್ಯವಿಲ್ಲ. ಸಾರ್ವಜನಿಕರಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅಧ್ಯಕ್ಷರು ಗಮನಕ್ಕೆ ತರಲಿ. ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.
–ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.