ADVERTISEMENT

ಮೈನವಿರೇಳಿಸಿದ ಎತ್ತಿನಗಾಡಿ ಓಟ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 9:17 IST
Last Updated 21 ನವೆಂಬರ್ 2017, 9:17 IST

ಕುಶಾಲನಗರ: ಹೆಬ್ಬಾಲೆ ಗ್ರಾಮ ದೇವತೆ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಏರ್ಪಡಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆ ನೆರೆದಿದ್ದವರ ಮೈನವಿರೇಳಿಸಿತು.

ಸ್ಪರ್ಧೆ ವೀಕ್ಷಣೆಗೆ ಹಂಪಾಪುರ, ಸರಗೂರು, ಮಲ್ಲಿನಾಥ ಪುರ, ಕೊಡಗು, ಮೈಸೂರು ಹಾಗೂ ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಗಡಿ ಭಾಗದ ಜನತೆ ಸೇರಿದ್ದರು.
ಮಾದರಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಓಟ ಹಾಗೂ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು.

ಬೆಳಿಗ್ಗೆ 11ಕ್ಕೆ ಸ್ಪರ್ಧೆ ಆರಂಭ ಗೊಂಡಿತು. ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನ ಶಿಳ್ಳೆ ಹೊಡೆಯುತ್ತ ಎತ್ತುಗಳಿಗೆ ಹುರಿದುಂಬಿಸುತ್ತಿದ್ದರು. ಕೆಲವು ಎತ್ತಿನ ಗಾಡಿಗಳು ಅಡ್ಡಾದಿಡ್ಡಿ ಓಡುತ್ತ ಜನರತ್ತ ಧಾವಿಸಿ ಬಂದವು.

ADVERTISEMENT

ಸ್ಪರ್ಧೆಗಳಿಗೆ ಜಿ.ಪಂ.ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಸ್.ರಾಜಶೇಖರ್ ಚಾಲನೆ ನೀಡಿದರು.

ಜತೆಗೆ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ರಂಗೋಲಿ, ಓಟ ಸ್ಪರ್ಧೆ, ಸಂಗೀತ ಕುರ್ಚಿ, ಮೂರು ಕಾಲಿನ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ನ. 21ರಂದು ಮಂಗಳವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

ಎತ್ತಿನ ಗಾಡಿ ಸ್ಪರ್ಧೆ ವಿಜೇತರು: ಎತ್ತಿನ ಗಾಡಿ ಚಕ್ರಕಟ್ಟಿ ಓಡಿಸುವ ಸ್ಪರ್ಧೆಯಲ್ಲಿ ಸಾಲಿಗ್ರಾಮದ ರಾಜು (9.16 ನಿಮಿಷ) ಪ್ರಥಮ ಸ್ಥಾನ, ಚಿಕ್ಕನಾಯಕಹೊಸಳ್ಳಿ ಭೂಮಿಕಾ (9.47 ಸೆಕೆಂಡ್) ದ್ವಿತೀಯ ಸ್ಥಾನ, ಸಾಲಿಗ್ರಾಮ ಮಧು (9.69 ನಿಮಿಷ) ಸಮಾಧಾನಕರ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.