ADVERTISEMENT

‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಆಂದೋಲನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 13:21 IST
Last Updated 29 ಸೆಪ್ಟೆಂಬರ್ 2018, 13:21 IST

ಕೋಲಾರ: ‘ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಅ.3ರಂದು ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ನೌಕರರ ಸಂಘದ ಜಿಲ್ಲಾ ಘಟಕದ ಗೌರವ ಸಲಹೆಗಾರ ಎಸ್.ನಂದೀಶ್‌ಕುಮಾರ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2006ರಿಂದ ಜಾರಿಯಾಗಿರುವ ನೂತನ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಜ.20ರಂದು ಹೋರಾಟ ನಡೆಸಿದ್ದೆವು. ಆಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್‌ ರದ್ದು ಘೋಷಿಸುವುದಾಗಿ ಭರವಸೆ ನೀಡಿದ್ದರು’ ಎಂದರು.

‘ದೇವೇಗೌಡರು ನೀಡಿದ್ದ ಭರವಸೆ ಹುಸಿಯಾಗಿದೆ. ಸರ್ಕಾರ ಪ್ರಸ್ತುತ ಜಾರಿ ಮಾಡಿರುವ ಮರಣ ಮತ್ತು ನಿವೃತ್ತ ಉಪಧನವನ್ನು 2006ರ ಏ.1ರಿಂದ ಅನ್ವಯ ಮಾಡಬೇಕೆಂದು ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎನ್‌ಪಿಎಸ್‌ ರದ್ದು ನಮ್ಮ ಹೋರಾಟದ ಪ್ರಮುಖ ಗುರಿ. ಈ ಗುರಿ ಸಾಧನೆ ದಿಸೆಯಲ್ಲಿ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಎಂಬ ಘೋಷಣೆಯೊಂದಿಗೆ ಹೋರಾಟ ಆರಂಭಿಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ಆದೇಶದಿಂದ ಅನ್ಯಾಯ: ‘2006ರ ಏ.1ರಿಂದ 2018ರ ಮಾರ್ಚ್ ಅಂತ್ಯದೊಳಗೆ ನೇಮಕಗೊಂಡ ನೌಕರರು ಹಾಗೂ ಅವರ ಕುಟುಂಬಕ್ಕೆ ಸರ್ಕಾರದ ನೂತನ ಆದೇಶದಿಂದ ಅನ್ಯಾಯವಾಗಲಿದೆ. ಈ ವಿಚಾರದಲ್ಲಿ ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತಿದೆ. 2006ರ ಏ.1ರಿಂದಲೇ ಅನ್ವಯವಾಗುವಂತೆ ನಿಶ್ಚಿತ ಪಿಂಚಣಿ ನೀಡಬೇಕು’ ಎಂದು ಮನವಿ ಮಾಡಿದರು.

ರಕ್ಷಣೆ ಇಲ್ಲ: ‘ಎನ್‌ಪಿಎಸ್‌ ಪದ್ಧತಿಯಿಂದ ನೌಕರರಿಗೆ ರಕ್ಷಣೆ ಇಲ್ಲವಾಗಿದೆ. ನೌಕರರ ಅವಲಂಬಿತರಿಗೆ ಕುಟುಂಬ ಪಿಂಚಣಿ ನೀಡಲು ಸರ್ಕಾರ ಕೆಲ ಷರತ್ತು ವಿಧಿಸಿದೆ. ನೌಕರನ ಖಾತೆಗೆ ಸರ್ಕಾರ ಪಾವತಿಸಿರುವ ತನ್ನ ಪಾಲಿನ ಮೊತ್ತವನ್ನು ಮಾತ್ರ ಹಿಂಪಡೆಯುವ ಷರತ್ತಿನೊಂದಿಗೆ 2006ರ ಏ.1ರಿಂದಲೇ ಕುಟುಂಬ ಪಿಂಚಣಿ ಪಡೆಯಲು ಅವಕಾಶ ಮಾಡಿಕೊಡಬೇಕು. ಷರತ್ತು ಮಾರ್ಪಡಿಸಿ ನೌಕರರ ಖಾತೆಯಲ್ಲಿನ ಒಟ್ಟು ವಂತಿಕೆಯಲ್ಲಿ ಶೇ 25ರಷ್ಟು ಹಣ ಹಿಂಪಡೆಯಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಹರೀಶ್‌ಬಾಬು, ಸಂಘಟನಾ ಕಾರ್ಯದರ್ಶಿ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಷಹಬಾದ್‌, ಜಯರಾಮರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.