ADVERTISEMENT

ರಾಜಕೀಯ ಏಳಿಗೆ ಸಹಿಸದೆ ಅಪಪ್ರಚಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 6:57 IST
Last Updated 6 ಸೆಪ್ಟೆಂಬರ್ 2017, 6:57 IST

ಮಾಲೂರು: ‘ಸ್ಥಳೀಯ ಶಾಸಕರು ನನ್ನ ರಾಜಕೀಯ ಏಳಿಗೆ ಸಹಿಸದೆ ಅಧಿಕಾರಿಗಳ ಮೇಲೆ ಒತ್ತಡ ತಂದು ಭೂಕಬಳಿಕೆ ಸಂಬಂಧ ದೂರು ದಾಖಲಾಗುವಂತೆ ಮಾಡಿದ್ದಾರೆ’ ಎಂದು ಕೋಚಿಮುಲ್‌ ನಿರ್ದೇಶಕ ಕೆ.ವೈ.ನಂಜೇಗೌಡ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಟೇಕಲ್‌ ಹೋಬಳಿಯ ಹರದಕೊತ್ತೂರು ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಚಿಲ್ಲರೆ ರಾಜಕಾರಣ ಮಾಡಿಕೊಂಡಿದ್ದ ಮಂಜುನಾಥ್‌ಗೌಡ ಅವರನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದು ಶಾಸಕನಾಗಿ ಮಾಡಿದೆ. ಆದರೆ, ಅವರಿಗೆ ಕೃತಜ್ಞತೆ ಇಲ್ಲ ಎಂದು ಕಿಡಿಕಾರಿದರು.

ತಾನು ಜೆಡಿಎಸ್‌ನಲ್ಲಿದ್ದಾಗ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಲು ಹಿಡಿದು ಮಂಜುನಾಥ್‌ಗೌಡಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಿಸಿದ್ದೆ. ತಾನು ಜೆಡಿಎಸ್‌ನಲ್ಲಿ ಇರುವವರೆಗೂ ಮಂಜುನಾಥ್‌ಗೌಡ ತನ್ನ ಜತೆ ಚೆನ್ನಾಗಿಯೇ ಇದ್ದರು. ಪಕ್ಷ ತೊರೆದ ನಂತರ ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆಟ ಕ್ಷೇತ್ರದಲ್ಲಿ ನಡೆಯಲ್ಲ ಎಂದರು.

ADVERTISEMENT

ದಾಖಲೆಪತ್ರಗಳಿವೆ: ತಾನು ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆಪತ್ರ ಸೃಷ್ಟಿಸಿರುವುದಾಗಿ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಹರದಕೊತ್ತೂರು ಗ್ರಾಮದಲ್ಲಿ 2 ಎಕರೆ ಸರ್ಕಾರಿ ಜಮೀನು ಕಬಳಿಸಿರುವುದಾಗಿ ಶಾಸಕರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. 2005ರಲ್ಲೇ ರಾಮಣ್ಣ ಎಂಬುವರಿಂದ ಆ ಜಮೀನು ಖರೀದಿಸಿರುವುದಕ್ಕೆ ದಾಖಲೆಪತ್ರಗಳಿವೆ ಎಂದು ಸ್ಪಷ್ಟಪಡಿಸಿದರು.

ಆ ಜಮೀನನ್ನು ಸಿ.ಎಚ್.ಚನ್ನಯ್ಯ ಎಂಬುವರಿಗೆ ಮಾರಿದ್ದೆ. ಅದೇ ಜಮೀನಿನಲ್ಲಿ ಕ್ರಷರ್ ಆರಂಭಿಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ ಕಾರಣ ಚನ್ನಯ್ಯ ಅವರಿಂದ ಪುನಃ ಆ ಜಮೀನು ಖರೀದಿಸಿದೆ. ಜಿಲ್ಲಾಧಿಕಾರಿಯು ಕ್ರಷರ್‌ ಕಾರ್ಖಾನೆ ಸ್ಥಾಪನೆಗೆ 2008ರಲ್ಲಿ ಭೂಪರಿವರ್ತನೆ ಮಾಡಿಕೊಟ್ಟಿದ್ದರು. ಆಗಿನಿಂದ ಕಾನೂನು ರೀತಿಯಲ್ಲಿ ಕ್ರಷರ್ ನಡೆಸುತ್ತಿದ್ದೇನೆ ಎಂದು ವಿವರಿಸಿದರು.

ಠೇವಣಿ ಉಳಿಸಿಕೊಳ್ಳಲಿ: ಸಂಬಂಧಿಕರ ಹೆಸರಲ್ಲಿ ಸರ್ಕಾರಿ ಜಮೀನು ಕಬಳಿಸಿದ್ದೇನೆ ಎಂಬ ಶಾಸಕರ ಆರೋಪ ಸುಳ್ಳು. ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿಯ ಜಾಗಕ್ಕೂ ಮತ್ತು ಕ್ರಷರ್ ಇರುವ ಜಾಗಕ್ಕೂ ಯಾವುದೇ ಸಂಬಂಧವಿಲ್ಲ.

ಮುಂದಿನ ಚುನಾವಣೆಯಲ್ಲಿ ತನಗೆ ಟಿಕೆಟ್‌ ಕೈತಪ್ಪಬೇಕೆಂದು ಸಂಚು ಮಾಡಿರುವ ಶಾಸಕರು ಮತದಾರರಲ್ಲಿ ಕೆಟ್ಟ ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. ಶಾಸಕರು ಇಂತಹ ಚಿಲ್ಲರೆ ಕೆಲಸ ಬಿಟ್ಟು ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳುವತ್ತ ಗಮನ ಹರಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ, ಸದಸ್ಯರಾದ ಟಿ.ಮುನಿಯಪ್ಪ, ಸಿ.ಲಕ್ಷ್ಮಿ, ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.