ADVERTISEMENT

ವೈದ್ಯಕೀಯ ಸೇವೆ ವ್ಯತ್ಯಯ: ರೋಗಿಗಳ ನರಳಾಟ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 7:20 IST
Last Updated 17 ನವೆಂಬರ್ 2017, 7:20 IST
ಕೋಲಾರದಲ್ಲಿ ಗುರುವಾರ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆಗಾಗಿ ಸಾಲುಗಟ್ಟಿ ಕುಳಿತಿದ್ದರು.
ಕೋಲಾರದಲ್ಲಿ ಗುರುವಾರ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆಗಾಗಿ ಸಾಲುಗಟ್ಟಿ ಕುಳಿತಿದ್ದರು.   

ಕೋಲಾರ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ) ವಿರೋಧಿಸಿ ಜಿಲ್ಲೆಯಾದ್ಯಂತ ಗುರುವಾರ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಿ ರೋಗಿಗಳು ನರಳಾಡಿದರು.

ಜಿಲ್ಲೆಯಲ್ಲಿ ಸುಮಾರು 273 ಖಾಸಗಿ ಆಸ್ಪತ್ರೆಗಳಿದ್ದು, ಬಹುತೇಕ ಈ ಎಲ್ಲಾ ಆಸ್ಪತ್ರೆಗಳು ಇಡೀ ದಿನ ಮುಚ್ಚಿದ್ದವು. ಜತೆಗೆ ರಕ್ತನಿಧಿ ಕೇಂದ್ರಗಳು, ಪ್ರಯೋಗಾಲಯಗಳು, ಸ್ಕ್ಯಾನಿಂಗ್‌, ಎಕ್ಸ್‌ರೇ, ಡಯಾಗ್ನಿಸ್ಟಿಕ್‌ ಕೇಂದ್ರಗಳು ಸಹ ಬಂದ್ ಆಗಿದ್ದವು. ರೋಗಿಗಳು ಸಂಬಂಧಿಕರೊಡನೆ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲಾ ಕೇಂದ್ರದಲ್ಲಿನ ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಇಟಿಸಿಎಂ, ಕೋಲಾರ ನರ್ಸಿಂಗ್ ಹೋಂ, ಸುಗುಣ ನರ್ಸಿಂಗ್ ಹೋಂ, ಗಣೇಶ್‌ ಹೆಲ್ತ್‌ಕೇರ್‌, ಶ್ರೀನಿವಾಸ ನರ್ಸಿಂಗ್‌ ಹೋಂ, ಹೋಪ್‌ ಹೆಲ್ತ್‌ಕೇರ್‌, ಮಂಜುನಾಥ್‌ ಹೆಲ್ತ್‌ಕೇರ್‌, ಶ್ರೇಯಸ್‌ ಆಸ್ಪತ್ರೆ, ಗೌರವ್‌ ಆಸ್ಪತ್ರೆ ಬಂದ್ ಆಗಿದ್ದವು.

ADVERTISEMENT

ಜಿಲ್ಲಾ ಕೇಂದ್ರದಲ್ಲಿ ಬುಧವಾರ ರಾತ್ರಿ ಸಭೆ ನಡೆಸಿದ್ದ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಭಾರತೀಯ ವೈದ್ಯ ಸಂಘದ (ಐಎಂಎ) ಸದಸ್ಯರು ಹಾಗೂ ವೈದ್ಯರು, ಒಳ ರೋಗಿಗಳಿಗೆ ಮತ್ತು ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಮಾತ್ರ ವೈದ್ಯಕೀಯ ಸೇವೆ ನೀಡುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ ಆಸ್ಪತ್ರೆಗಳಲ್ಲಿ ಹೊಸದಾಗಿ ಯಾವುದೇ ರೋಗಿಗಳನ್ನು ಒಳ ರೋಗಿಗಳಾಗಿ ದಾಖಲು ಮಾಡಿಕೊಳ್ಳಲಿಲ್ಲ.

ಮುಷ್ಕರದ ಫಲಕ: ಖಾಸಗಿ ಆಸ್ಪತ್ರೆಗಳ ಮುಂದೆ ಮುಷ್ಕರದ ಫಲಕ ನೇತು ಹಾಕಲಾಗಿತ್ತು. ರೋಗಿಗಳು ಆ ಫಲಕ ನೋಡಿ ಬೇರೆ ಆಸ್ಪತ್ರೆಗಳತ್ತ ಹೋಗುತ್ತಿದ್ದರು. ಆದರೆ, ಅಲ್ಲಿಯೂ ಚಿಕಿತ್ಸೆ ಸಿಗದೆ ರೋಗಿಗಳಿಗೆ ಹೆಚ್ಚಿನ ತೊಂದರೆಯಾಯಿತು. ಮುಷ್ಕರದ ವಿಷಯ ತಿಳಿಯದೆ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಯ ಬಾಗಿಲು ತೆಗೆಯಬಹುದೆಂದು ಗಂಟೆಗಟ್ಟಲೇ ಕಾದು ಕುಳಿತಿದ್ದರು. ಸಾಕಷ್ಟು ಸಮಯ ಕಾದರೂ ಬಾಗಿಲು ತೆರೆಯದಿದ್ದರಿಂದ ರೋಗಿಗಳು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋದರು.

ಸಾಲುಗಟ್ಟಿ ನಿಂತ ರೋಗಿಗಳು: ಜಿಲ್ಲಾ ಕೇಂದ್ರದಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳಿಂದ ತುಂಬಿ ಹೋಗಿದ್ದವು. ನೊಂದಣಿ, ಪ್ರಯೋಗಾಲಯ ಮತ್ತು ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿದ್ದರು.

ಎಲ್ಲ ಸರ್ಕಾರಿ ವೈದ್ಯರಿಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆದೇಶ ಹೊರಡಿಸಿದ್ದರು. ಜತೆಗೆ ಕಾರ್ಯ ಸ್ಥಳದಲ್ಲಿದ್ದು, ದಿನದ 24 ತಾಸೂ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದರು. ಆದರೂ ಎಸ್‌ಎನ್‌ಆರ್‌ ಆಸ್ಪತ್ರೆಯ ಕಣ್ಣು, ಮೂಗು ತಪಾಸಣಾ ವಿಭಾಗದಲ್ಲಿ ವೈದ್ಯರೇ ಇರಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದ ರೋಗಿಗಳು ವೈದ್ಯರನ್ನು ಶಪಿಸುತ್ತಾ ಗಂಟೆಗಟ್ಟಲೇ ಕಾಯುವಂತಾಯಿತು.

* * 

ಮುಷ್ಕರದ ಕಾರಣ ಸರ್ಕಾರಿ ವೈದ್ಯರಿಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿತ್ತು. ರಜೆಯಲ್ಲಿದ್ದ ವೈದ್ಯರನ್ನು ವಾಪಸ್‌ ಕರೆಸಿಕೊಂಡು ಪರಿಸ್ಥಿತಿ ನಿಭಾಯಿಸಿದ್ದೇವೆ.
ಡಾ.ವಿಜಯಕುಮಾರ್‌,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.