ADVERTISEMENT

ಶಾಸಕರ ಹೇಳಿಕೆಗೆ ಕಿವಿಗೂಡಬೇಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 8:42 IST
Last Updated 23 ಸೆಪ್ಟೆಂಬರ್ 2017, 8:42 IST

ಕೋಲಾರ: ‘ಹಾಲು ಒಕ್ಕೂಟದ ಬಗ್ಗೆ ಅರಿವಿಲ್ಲದೆ ಶಾಸಕ ವರ್ತೂರು ಪ್ರಕಾಶ್‌ ನೀಡಿರುವ ಹೇಳಿಕೆಗೆ ಯಾರೂ ಕಿವಿಗೊಡಬಾರದು’ ಎಂದು ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ತಿಳಿಸಿದರು.

ತಾಲ್ಲೂಕಿನ ದೊಡ್ಡಹಸಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ (ಎಂಪಿಸಿಎಸ್‌) ಸದಸ್ಯರ ಸಭೆಯಲ್ಲಿ ಮಾತನಾಡಿ, ‘ವರ್ತೂರು ಪ್ರಕಾಶ್‌ ಅವರು ತಮ್ಮ ಡೇರಿಯಲ್ಲಿನ ಹಾಲನ್ನು ಒಕ್ಕೂಟ ಖರೀದಿಸಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಒಪ್ಪದ ಕಾರಣ ಒಕ್ಕೂಟದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದರು.

‘ಯಾವುದೇ ಸಂಘ ಆರ್ಥಿಕವಾಗಿ ಅಭಿವೃದ್ಧಿಯಾದರೆ ಸಾಲದು. ಗಳಿಸಿದ ಲಾಭದಲ್ಲಿ ಸಾಮಾಜಿಕ ಕಾರ್ಯಕ್ರಮ ಕೈಗೊಂಡಾಗ ಮಾತ್ರ ಹೆಸರು ಗಳಿಸಲು ಸಾಧ್ಯ. ದೊಡ್ಡಹಸಾಳ ಎಂಪಿಸಿಎಸ್‌ ₹ 5 ಲಕ್ಷಕ್ಕೂ ಹೆಚ್ಚು ಲಾಭ ಗಳಿಸುವ ಮೂಲಕ ಇತರೆ ಸಂಘಗಳಿಗೆ ಮಾದರಿಯಾಗಿದೆ. ತಾಲ್ಲೂಕಿನಲ್ಲಿ ಸುಮಾರು 230 ಹಾಲು ಸಂಘಗಳಿವೆ. ಪ್ರತಿ ಸಂಘದಿಂದ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ’ ಎಂದರು.

ADVERTISEMENT

‘ಒಕ್ಕೂಟದಿಂದ ಅಕ್ಟೋಬರ್‌ ತಿಂಗಳಲ್ಲಿ ಕೋಚಿಮುಲ್ ವಿಮಾ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ರೈತರು ಈ ಯೋಜನೆಯಲ್ಲಿ ಹೆಸರು ನೊಂದಾಯಿಸಿದರೆ ₹ 2 ಲಕ್ಷದಿಂದ ₹ 3 ಲಕ್ಷದವರೆಗೆ ವಿಮೆ ಸೌಲಭ್ಯ ಸಿಗುತ್ತದೆ’ ಎಂದು ವಿವರಿಸಿದರು.

‘ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಲು ಒಕ್ಕೂಟದಿಂದ ₹ 2 ಲಕ್ಷ ಹಾಗೂ ಕೆಎಂಎಫ್‌ನಿಂದ ₹ 3 ಲಕ್ಷ ಮಂಜೂರು ಮಾಡಿಸುತ್ತೇನೆ. ಸಂಘದ ಸದಸ್ಯರು ಉಪ ಸಮಿತಿ ರಚಿಸಿಕೊಂಡು ಶೀಘ್ರವೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಲಹೆ ನೀಡಿದರು.

ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕೋಚಿಮುಲ್‌ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ವಿಸ್ತರಣಾಧಿಕಾರಿ ವಿ.ರಾಜಬಾಬು, ದೊಡ್ಡಹಸಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯೆ ಅಂಬಿಕಾ, ಎಂಪಿಸಿಎಸ್‌ ಅಧ್ಯಕ್ಷ ಆರ್.ಪಾಂಡುರಂಗ, ನಿರ್ದೇಶಕರಾದ ಎಚ್.ವೆಂಕಟಸ್ವಾಮಿ, ವಿ.ಗೋವಿಂದ, ಎಂ.ಬಾಬು, ವಿ.ಶಿವಪ್ಪ, ವೆಂಕಟಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.