ADVERTISEMENT

ಶುಶ್ರೂಷಕಿಯರಿಗೆ ವಂಚಿಸಿದ ಆಸ್ಪತ್ರೆ ಸಿಬ್ಬಂದಿ

₹ 11.50 ಲಕ್ಷ ದುರ್ಬಳಕೆ; ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಮ್ಮುಖದಲ್ಲಿ ತಪ್ಪೊಪ್ಪಿಗೆ, ಹಣ ಪಾವತಿಯ ಭರವಸೆ

ಡಾ.ಕೃಷ್ಣಮೂರ್ತಿ
Published 11 ಜುಲೈ 2017, 8:57 IST
Last Updated 11 ಜುಲೈ 2017, 8:57 IST

ಕೆಜಿಎಫ್‌: ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಭತ್ಯೆ ಮತ್ತಿತರ ಆರ್ಥಿಕ ಸವಲತ್ತುಗಳನ್ನು ದುರುಪಯೋಗ ಮಾಡಿಕೊಂಡು ನಂತರ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಆಸ್ಪತ್ರೆಯಲ್ಲಿ ಸುಮಾರು ₹ 11.50 ಲಕ್ಷ ದುರ್ಬಳಕೆ ಆಗಿದ್ದು, ಇದುವರೆಗೆ ₹ 6,05,817 ವಂಚಿಸಿರುವುದು ದಾಖಲೆ ಸಮೇತ ಪತ್ತೆಯಾಗಿದೆ. ಎಲ್ಲಾ ವಂಚನೆ ಪ್ರಕರಣಗಳು ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿಯಲ್ಲಿಯೇ ನಡೆದಿದ್ದು, ನಾಲ್ವರು ಸಿಬ್ಬಂದಿ ಶಾಮೀಲಾಗಿದ್ದಾರೆ ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಶ್ರೂಷಕಿಯರಾದ ಸಂಪಂಗಿ ಸೆಲ್ವಿ, ಜಯಲಕ್ಷ್ಮೀ ಮತ್ತು ಶೀಲಾ ಅವರು ವಂಚನೆಗೆ ಒಳಗಾಗಿದ್ದಾರೆ. ಅವರಿಗೆ ಸರ್ಕಾರದಿಂದ ಬರಬೇಕಾಗಿದ್ದ ಭತ್ಯೆಯನ್ನು ಗುಮಾಸ್ತರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಅದಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಫಯಾಜ್‌ಖಾನ್‌ ಅನುಮತಿಯನ್ನು ನೀಡಿರುವುದು ದಾಖಲೆಗಳಲ್ಲಿ ನಮೂದಾಗಿದೆ.

ADVERTISEMENT

ರಾಬರ್ಟಸನ್‌ಪೇಟೆ ಆಸ್ಪತ್ರೆಯಲ್ಲಿ ಶುಶ್ರೂಷಕಿಯರು ಮತ್ತು ಡಿ ದರ್ಜೆ ನೌಕರರಿಗೆ ಇಂಥ ವಂಚನೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಹಿರಿಯ ಅಧಿಕಾರಿಗಳು ಮತ್ತು ಗುಮಾಸ್ತರಿಂದ ಕಿರುಕುಳದ ಭಯದಿಂದ ಬಾಯಿ ಬಿಟ್ಟಿರಲಿಲ್ಲ. ಇಂತಹ ಸನ್ನಿವೇಶವನ್ನು ದುರುಪಯೋಗ ಮಾಡಿಕೊಂಡ ಆಸ್ಪತ್ರೆಯ ಭತ್ಯೆಯನ್ನೂ ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೇ 16ರಂದು ಎನ್‌ಜಿಒ ಸಂಬಳದ ಬಿಲ್ ಶೀರ್ಷಿಕೆಯಲ್ಲಿ ₹ 6,05,817 (ವೋಚರ್‌ ಸಂಖ್ಯೆ 1705000017) ಇಲ್ಲಿನ ಉಪಖಜಾನೆಯಿಂದ ಪಡೆದ ಸಿಬ್ಬಂದಿ ಅದೇ ದಿನ ರಾಬರ್ಟಸನ್‌ಪೇಟೆಯ ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರು ಶಾಖೆಗೆ ಸಲ್ಲಿಸಿದ್ದಾರೆ. ಸದರಿ ಹಣವನ್ನು ಶುಶ್ರೂಷಕಿಯರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಲ್ಲ.

ಗುಮಾಸ್ತರಾದ ಎನ್‌. ನಾರಾಯಣಸ್ವಾಮಿ (ಖಾತೆ ಸಂಖ್ಯೆ 64039772909) ಮತ್ತು ಎಸ್‌. ಸುನಿಲ್‌ ಕುಮಾರ್‌ (ಖಾತೆ ಸಂಖ್ಯೆ 64055286251) ತಮ್ಮ ವೈಯಕ್ತಿಕ ಖಾತೆಗೆ ಕ್ರಮವಾಗಿ ₹ 2,94,708 ಮತ್ತು ₹ 3,11,109 ವರ್ಗಾಯಿಸಿಕೊಂಡಿದ್ದಾರೆ. ನಂತರ ವಿಚಾರ ಆಸ್ಪತ್ರೆ ಸಿಬ್ಬಂದಿಗೆ ಗೊತ್ತಾದಾಗ ಮೂವರು ಶುಶ್ರೂಷಕಿಯರು ವಂಚನೆಗೆ ಒಳಗಾಗಿರುವುದು ಪತ್ತೆಯಾಗಿದೆ’ ಎಂದು ಜಿಲ್ಲಾ ಶುಶ್ರೂಷಕಿಯರ ಸಂಘದ ಅಧ್ಯಕ್ಷೆ ವಿಜಯಮ್ಮ ತಿಳಿಸಿದ್ದಾರೆ.

ಶುಶ್ರೂಷಕಿಯರು ತಮಗಾದ ವಂಚನೆಯನ್ನು ಸರಿಪಡಿಸುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಪತ್ರ ಬರೆದಿದ್ದಾರೆ. ಆದರೆ ಒಂದೂವರೆ ತಿಂಗಳಾದರೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮನವಿ ಪುರಸ್ಕರಿಸಲಿಲ್ಲ. ಇದರಿಂದ ಬೇಸತ್ತ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾದರು. ಆಗ ಮಧ್ಯೆ ಪ್ರವೇಶಿಸಿದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು ಎಂದೂ ಅವರು ಹೇಳಿದರು.

ಸರ್ಕಾರಕ್ಕೆ ಪತ್ರ: ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಫಯಾಜ್‌ ಖಾನ್‌, ಗುಮಾಸ್ತರಾದ ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ಸುನೀಲ್‌ ಕುಮಾರ್‌ ಮತ್ತು ಸುಬ್ರಹ್ಮಣಿ ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಅನುಮತಿ ಕೋರಿ ಶುಶ್ರೂಷಕಿಯರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.  ಆದರೂ ತನಿಖೆಗೆ ಒತ್ತಡ ಹೆಚ್ಚುತ್ತಿದೆ ಎಂದು ಮೂಲಗಳು ಹೇಳಿವೆ.

ತಪ್ಪೊಪ್ಪಿಗೆ ಪತ್ರ: ಈ ನಡುವೆ ವಂಚನೆ ಆರೋಪ ಎದುರಿಸುತ್ತಿರುವ ಸಿಬ್ಬಂದಿ ಜಿಲ್ಲಾ ಶಸ್ತ್ರ ಚಿಕಿತ್ಸಕರ ಮಧ್ಯಸ್ಥಿಕೆಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ.
‘ಮೂವರು ಶುಶ್ರೂಷಕಿಯರ ಹಣವನ್ನು ಖೊಟ್ಟಿ ಬಿಲ್ ತಯಾರಿಸಿ ಅಕ್ರಮವಾಗಿ ಬಳಸಿಕೊಂಡಿದ್ದೇನೆ. ನಾನು ಡ್ರಾ ಮಾಡಿರುವ ಹಣಕ್ಕೂ ಶುಶ್ರೂಷಕಿಯರಿಗೂ ಯಾವುದೇ ಸಂಬಂಧವಿಲ್ಲ.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ಡ್ರಾ ಮಾಡಿರುವ ಹಣವನ್ನು ಸೋಮವಾರ (ಜುಲೈ 10ರ ಸಂಜೆ 4 ಗಂಟೆಯೊಳಗೆ) ಸರ್ಕಾರಕ್ಕೆ ಮರು ಪಾವತಿ ಮಾಡುತ್ತೇನೆ. ನನ್ನ ತಪ್ಪಿನ ಅರಿವಾಗಿದ್ದು, ಸ್ವ ಇಚ್ಛೆಯಿಂದ ತಪ್ಪನ್ನು ಒಪ್ಪಿಕೊಂಡಿದ್ದೇನೆ. ಮುಂದೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತೇನೆ’ ಎಂದು ಸಿಬ್ಬಂದಿ ಪ್ರತ್ಯೇಕವಾಗಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
***

ಶುಶ್ರೂಷಕಿಯರಿಗೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಕಚೇರಿಯಲ್ಲಿ ನಡೆಯುವ ವ್ಯವಹಾರಗಳು ಶುಶ್ರೂಷೆಯಲ್ಲಿ ತೊಡಗುವ ಸಿಬ್ಬಂದಿಗೆ ತಿಳಿಯುವುದಿಲ್ಲ
ವಿಜಯಮ್ಮ, ಜಿಲ್ಲಾ ಶುಶ್ರೂಷಕಿಯರ ಸಂಘದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.