ADVERTISEMENT

ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ

ಉಪ ವಿಭಾಗಾಧಿಕಾರಿಯ ಸಹಿ ನಕಲು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:54 IST
Last Updated 12 ಏಪ್ರಿಲ್ 2017, 4:54 IST

ಕೋಲಾರ: ಜಿಲ್ಲೆಯ ಉಪ ವಿಭಾಗಾಧಿಕಾರಿ ಸಿ.ಎನ್‌.ಮಂಜುನಾಥ್‌ರ ಸಹಿಯನ್ನು ನಕಲು ಮಾಡಿ ಭೂದಾಖಲೆ ಆದೇಶ ಸೃಷ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಉಪ ವಿಭಾಗಾಧಿಕಾರಿಯು   ವೇಮಗಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ತಾಲ್ಲೂಕಿನ ವೇಮಗಲ್‌ ಹೋಬಳಿಯ ರಾಜಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ 195ರಲ್ಲಿ ಸರ್ಕಾರಕ್ಕೆ ಸೇರಿದ 4 ಎಕರೆ 20 ಗುಂಟೆ ಜಮೀನು ಇದೆ. ತಾಲ್ಲೂಕಿನ ಸುಗಟೂರು ಹೋಬಳಿಯ ಸೋಮಾಂಬುದಿ ಅಗ್ರಹಾರ ಗ್ರಾಮದ ಕೃಷ್ಣಪ್ಪ ಎಂಬುವರು ಆ ಜಮೀನಿಗೆ ಸಂಬಂಧಪಟ್ಟಂತೆ ನಕಲಿ ದಾಖಲೆಪತ್ರ ಸೃಷ್ಟಿಸಿದ್ದಾರೆ. ಜತೆಗೆ ಆ ದಾಖಲೆಪತ್ರಗಳಲ್ಲಿ ನನ್ನ ಸಹಿಯನ್ನು ನಕಲು ಮಾಡಲಾಗಿದೆ’ ಎಂದು ಮಂಜುನಾಥ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಜಮೀನಿನ ಪಹಣಿಯಲ್ಲಿ ತಮ್ಮ ಹೆಸರು ನಮೂದು ಮಾಡಲು ಕೋರಿ ನನಗೆ ಅರ್ಜಿ ಸಲ್ಲಿಸಿರುವಂತೆ ಕೃಷ್ಣಪ್ಪ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೇ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ವಿಭಾಗದ ಆಯುಕ್ತರಿಂದ ಆ ಜಮೀನು ತನಗೆ ಮಂಜೂರಾಗಿರುವಂತೆ ಕೃಷ್ಣಪ್ಪ ನಕಲು ಆದೇಶ ಪ್ರತಿ ಸೃಷ್ಟಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಜಮೀನಿಗೆ ಸಂಬಂಧಪಟ್ಟ ದಾಖಲೆಪತ್ರ ನೈಜವಲ್ಲ. ಜತೆಗೆ ಆ ದಾಖಲೆಪತ್ರದಲ್ಲಿನ ಸಹಿ ನನ್ನದಲ್ಲ. ಅಲ್ಲದೇ, ಆ ಜಮೀನಿನ ಒಡೆತನಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ರೀತಿ ನಕಲಿ ದಾಖಲೆಪತ್ರ ಮತ್ತು ನ್ಯಾಯಾಲಯದ ಆದೇಶ ಪ್ರತಿ ಎಂದು ಖೊಟ್ಟಿ ಆದೇಶ ಪತ್ರ ಸೃಷ್ಟಿಸಿ ಸರ್ಕಾರಿ ಜಮೀನು ಲಪಟಾಯಿಸಲು ಯತ್ನಿಸಿರುವ ಕೃಷ್ಣಪ್ಪ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಮಂಜುನಾಥ್‌ ದೂರಿನಲ್ಲಿ ಕೋರಿದ್ದಾರೆ.

ಉಪ ವಿಭಾಗಾಧಿಕಾರಿಯು ಪೊಲೀಸರಿಗೆ ದೂರು ಸಲ್ಲಿಸಿ 24 ದಿನಗಳು ಕಳೆದಿವೆ. ಆದರೆ, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ದೂರು ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ.

ನಕಲಿ ದಾಖಲೆಪತ್ರ ಸೃಷ್ಟಿಸಿರುವ ಆರೋಪ ಎದುರಿಸುತ್ತಿರುವ ಕೃಷ್ಣಪ್ಪ ಅವರು ದೂರು ದಾಖಲಿಸದಂತೆ ಪೊಲೀಸರ ಮೇಲೆ ಕ್ಷೇತ್ರದ ಪ್ರಭಾವಿ ರಾಜಕಾರಣಿಯೊಬ್ಬರಿಂದ ಒತ್ತಡ ಹೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.