ADVERTISEMENT

ಸೆ.20ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:22 IST
Last Updated 13 ಸೆಪ್ಟೆಂಬರ್ 2017, 9:22 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಕೋಲಾರ ಹೊರವಲಯದ ಜಿಲ್ಲಾಡಳಿತ ಭವನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಕೋಲಾರ ಹೊರವಲಯದ ಜಿಲ್ಲಾಡಳಿತ ಭವನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.   

ಕೋಲಾರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.20ರಂದು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ನೂತನ ಜಿಲ್ಲಾಡಳಿತ ಭವನದ ಪಕ್ಕದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ನಗರದ ಹೊರವಲಯದ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ಅವರು, ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುಮಾರು 10 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿಯು ಜಿಲ್ಲಾಡಳಿತ ಭವನ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಚೇರಿಯನ್ನು ಲೋಕಾರ್ಪಣೆ ಮಾಡುತ್ತಾರೆ. ಅಲ್ಲದೇ, ಶ್ರೀನಿವಾಸಪುರ ಬಳಿ ನಿರ್ಮಿಸಲು ಉದ್ದೇಶಿಸಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸುತ್ತಾರೆ. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ನಸೀರ್‌ ಅಹಮ್ಮದ್‌ ಮಾಲೀಕತ್ವದ ಸ್ಕಾಟ್‌ ಗಾರ್ಮೆಂಟ್ಸ್ ಕಟ್ಟಡ ಮತ್ತು ಕೆಜಿಎಫ್ ಹೊಸ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೇದಿಕೆಯಿಂದಲೇ ಉದ್ಘಾಟಿಸುತ್ತಾರೆ ಎಂದು ವಿವರಿಸಿದರು.

ADVERTISEMENT

ಮುಖ್ಯಮಂತ್ರಿ ಹೆಲಿಕಾಪ್ಟರ್‌ ಮೂಲಕ ಜಿಲ್ಲೆಗೆ ಆಗಮಿಸಲಿದ್ದು, ಕಾರ್ಯಕ್ರಮದ ವೇಳೆ ಭದ್ರತಾ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಗಣ್ಯರು ಹಾಗೂ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.

ಕಾಂಗ್ರೆಸ್‌ ಸಮಾವೇಶ: ಕೆ.ಸಿ ವ್ಯಾಲಿ ಯೋಜನೆ ಲೋಕಾರ್ಪಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಮಾಡಬೇಕಾದ ಸಿದ್ಧತೆ ಕುರಿತು ಜಿಲ್ಲಾ ಪಂಚಾಯಿತಿಯಲ್ಲಿ ಸೆ.15ರಂದು ಅಧಿಕಾರಿಗಳ ಸಭೆ ನಡೆಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಇ ಬಿ.ಬಿ.ಕಾವೇರಿ ಅವರಿಗೆ ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ವಿ.ಆರ್.ಸುದರ್ಶನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಮಾಜಿ ಸಚಿವ ಕೆ.ಎ.ನಿಸಾರ್‍ ಅಹಮದ್, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.