ADVERTISEMENT

ಸ್ವಚ್ಛ ಭಾರತ್‌: ಜಿಲ್ಲೆ ಪ್ರಥಮ ಸ್ಥಾನಕ್ಕೇರಲಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:51 IST
Last Updated 24 ಮೇ 2017, 6:51 IST

ಕೋಲಾರ: ‘ಜಿಲ್ಲೆಯಲ್ಲಿ ಬುದ್ದಿ ಜೀವಿಗಳು ಹಾಗೂ ಶ್ರಮ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಲು, ರೇಷ್ಮೆ ಮತ್ತು ಮಾವು ಉತ್ಪಾದನೆಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ಸ್ವಚ್ಛ ಭಾರತ್‌ ಮಿಷನ್‌ ಅನುಷ್ಠಾನದಲ್ಲೂ ಜಿಲ್ಲೆ ಪ್ರಥಮ ಸ್ಥಾನಕ್ಕೇರಬೇಕು’ ಎಂದು ಮೂಲಸೌಕರ್ಯ ಇಲಾಖೆ ನಿರ್ದೇಶಕ ಹಾಗೂ ಜಿಲ್ಲಾ ಸ್ವಚ್ಛ ಭಾರತ್ ಮಿಷನ್‌ ನೋಡಲ್ ಅಧಿಕಾರಿ ಕೃಷ್ಣಪ್ಪ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಸ್ವಚ್ಛ ಭಾರತ್ ಮಿಷನ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯು ಅ.2ರ ಗಾಂಧಿ ಜಯಂತಿಯೊಳಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.

‘ಕೇಂದ್ರ ಸರ್ಕಾರದ ಯೋಜನೆಯಾದ ಸ್ವಚ್ಛ ಭಾರತ್‌ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಕರ್ನಾಟಕ ರಾಜ್ಯವು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಮತ್ತು ವಿಶ್ವವಿಖ್ಯಾತ ಎಂಜಿನಿಯರ್‌ ವಿಶ್ವೇಶ್ವರಯ್ಯ ಜನಿಸಿದ ಅವಿಭಜಿತ ಕೋಲಾರ ಜಿಲ್ಲೆಯ ಬಗ್ಗೆ ಸರ್ಕಾರಕ್ಕೆ ಹೆಚ್ಚಿನ ಕಾಳಜಿ ಇದೆ’ ಎಂದರು.

ADVERTISEMENT

‘ಸ್ವಚ್ಛ ಭಾರತ್‌ ಅಭಿಯಾನದ ಅನುಷ್ಠಾನಕ್ಕೆ ಕಾಲಾವಕಾಶ ಕಡಿಮೆ ಇದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರ ಪಡೆದು ಹಗಲು ರಾತ್ರಿ ಶ್ರದ್ಧೆ ವಹಿಸಿ ಕೆಲಸ ಮಾಡಬೇಕು. ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕೊರತೆ ಇಲ್ಲ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಮಾತನಾಡಿ, ‘ಶೌಚಾಲಯಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಹೀಗಾಗಿ ಶೇ 100ರಷ್ಟು ಶೌಚಾಲಯ ನಿರ್ಮಾಣದ ಗುರಿ ಸಾಧನೆಯಾಗಬೇಕು. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಜಾಗೃತಿ ಸಮಿತಿ ರಚಿಸಿ, ಸಮಿತಿಯಲ್ಲಿನ ಸದಸ್ಯರ ಪಟ್ಟಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶೌಚಾಲಯ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ನೀಡುತ್ತಿದೆ. ಹಿಂದುಳಿದ ವರ್ಗದವರಿಗೆ ಶೌಚಾಲಯ ನಿರ್ಮಾಣಕ್ಕೆ ₹ 12 ಸಾವಿರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹ 15 ಸಾವಿರ ನೀಡಲಾಗುತ್ತಿದೆ. ಪಂಚಾಯಿತಿಗಳಲ್ಲಿ ಬಾಕಿ ಇರುವ ಶೌಚಾಲಯಗಳ ನಿರ್ಮಾಣಕ್ಕೆ ಶೀಘ್ರವೇ ಕಾರ್ಯಾದೇಶ ನೀಡಿ. ಮೂರು ತಿಂಗಳೊಳಗೆ ಶೇ 100ರಷ್ಟು ಗುರಿ ಸಾಧನೆಯಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ವಿವಿಧ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಪಿಡಿಒಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.