ADVERTISEMENT

ಹಗಲುಗನಸು ಕಾಣುತ್ತಿರುವ ವರ್ತೂರು ಪ್ರಕಾಶ್

ಗೆಲುವು ಯಾರಿಗೆ ಕಾದು ನೋಡಲಿ; ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಲೇವಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 10:39 IST
Last Updated 24 ಏಪ್ರಿಲ್ 2018, 10:39 IST

ಕೋಲಾರ: ‘ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಗೌಣ. ಇಲ್ಲಿ ಚುನಾವಣಾ ಜಿದ್ದಾಜಿದ್ದಿ ಇರುವುದು ಜೆಡಿಎಸ್ ಮತ್ತು ವರ್ತೂರು ಪ್ರಕಾಶ್ ನಡುವೆ ಮಾತ್ರ’ ಎಂದು ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿ ಮಾತನಾಡಿ, ‘ಶಾಸಕ ವರ್ತೂರು ಪ್ರಕಾಶ್ ಗೆಲುವಿನ ಹಗಲುಗನಸು ಕಾಣುತ್ತಿದ್ದಾರೆ. ಜನ ಈ ಚುನಾವಣೆಯಲ್ಲಿ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಕಾದು ನೋಡಲಿ’ ಎಂದು ವ್ಯಂಗ್ಯವಾಡಿದರು.

‘ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ವರ್ತೂರು ಪ್ರಕಾಶ್‌ ನಡುವೆ ಮಾತ್ರ ಚುನಾವಣೆ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕ್ಷೇತ್ರದಲ್ಲಿ ಇಲ್ಲ. ಕಾಂಗ್ರೆಸ್‌ನಿಂದ ಅಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರ ಹಿಂದಿನ ಮರ್ಮವೇನು ಎಂಬ ಬಗ್ಗೆ ಸಂಸದ ಕೆ.ಎಚ್.ಮುನಿಯಪ್ಪ ಅವರೇ ಉತ್ತರ ಹೇಳಬೇಕು’ ಎಂದು ಕುಟುಕಿದರು.

ADVERTISEMENT

‘ಜೆಡಿಎಸ್‌ನಲ್ಲಿ ಒಗ್ಗಟ್ಟು ಇಲ್ಲ. ಪಕ್ಷದ ಮನೆಯ ಹಾಲು ಕೆಟ್ಟು ಮೊಸರಾಗಿದೆ ಎಂದು ವರ್ತೂರು ಪ್ರಕಾಶ್‌ ಹೇಳಿದ್ದಾರೆ. ಮೊಸರಿನಿಂದ ಬೆಣ್ಣೆ ತೆಗೆದು ತುಪ್ಪ ಕಾಯಿಸಿ ತಿನ್ನೋದು ನನಗೆ ಗೊತ್ತಿದೆ. ಪಾಪಾ ಅವರು ಸೋಲಿನ ಭೀತಿಯಿಂದ ಮನಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರವೀಣರು: ‘10 ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಆದರೆ, ಶಾಸಕರು ಮಾತ್ರ ಚೆನ್ನಾಗಿ ಅಭಿವೃದ್ಧಿಯಾಗಿದ್ದಾರೆ. ದಲಿತರ ಜಮೀನು ಕಬಳಿಸುವುದು ಮತ್ತು ಗುತ್ತಿಗೆದಾರರನ್ನು ಉದ್ಧಾರ ಮಾಡುವುದರಲ್ಲಿ ವರ್ತೂರು ಪ್ರಕಾಶ್‌ ಪ್ರವೀಣರು’ ಎಂದು ಲೇವಡಿ ಮಾಡಿದರು.

‘ಕ್ಷೇತ್ರದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ಜನಸಾಮಾನ್ಯರ ಕೆಲಸಗಳು ಆಗುವುದಿಲ್ಲ. ಹಾಲಿ ಶಾಸಕರು ಯುವಕರಿಗೆ ಮದ್ಯದ ರುಚಿ ತೋರಿಸಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅವರ ವರ್ತನೆಯಿಂದ ಜನ ಬೇಸತ್ತಿದ್ದಾರೆ. ಕ್ಷೇತ್ರದಲ್ಲಿನ ಅವ್ಯವಸ್ಥೆಗೆ ಹಾಲಿ ಶಾಸಕರೇ ಕಾರಣ’ ಎಂದು ಆರೋಪಿಸಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಪುತ್ರ ಡಾ.ಎಚ್‌.ಡಿ.ರಮೇಶ್, ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ, ಪಕ್ಷದ ಜಿಲ್ಲಾ ಉಸ್ತುವಾರಿ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.