ADVERTISEMENT

ಮಾವಿನ ಮಡಿಲಲ್ಲಿ ಉಗನಿ ಹೂ ಹಬ್ಬ

ಆರ್.ಚೌಡರೆಡ್ಡಿ
Published 20 ಜನವರಿ 2018, 10:15 IST
Last Updated 20 ಜನವರಿ 2018, 10:15 IST
ಶ್ರೀನಿವಾಸಪುರ ತಾಲ್ಲೂಕಿನ ಕಾಡು ಮೇಡಲ್ಲಿ ಕಂಡುಬರುವ ಉಗನಿ ಹೂವು
ಶ್ರೀನಿವಾಸಪುರ ತಾಲ್ಲೂಕಿನ ಕಾಡು ಮೇಡಲ್ಲಿ ಕಂಡುಬರುವ ಉಗನಿ ಹೂವು   

ಶ್ರೀನಿವಾಸಪುರ ತಾಲ್ಲೂಕಿನ ಕಾಡು ಮೇಡು ಹಾಗೂ ರಸ್ತೆ ಬದಿಯಲ್ಲಿ ಹಬ್ಬಿರುವ ಬಳ್ಳಿಗಳಲ್ಲಿ ಬಿರಿದಿರುವ ಉಗನಿ ಹೂವು ನೋಡುಗರ ಕಣ್ಣು ತಣಿಸುತ್ತಿದೆ. ಮಾವಿನ ಮಡಿಲಿನ ಉದ್ದಗಲಕ್ಕೂ ಈ ಹೂವಿನ ಹಬ್ಬ ಎಲ್ಲೆಡೆ ಪಸರಿಸಿದೆ.

ಉಗನಿ ಒಂದು ಸಾಮಾನ್ಯ ಬಳ್ಳಿ. ಕಡಿಮೆ ತೇವಾಂಶ ಇರುವ ಕಡೆಗಳಲ್ಲೂ ಬೆಳೆಯಬಲ್ಲ ಈ ಬಳ್ಳಿ ರೈತ ಸ್ನೇಹಿ. ಎಲ್ಲೆಂದರಲ್ಲಿ ದಟ್ಟವಾಗಿ ಬೆಳೆಯುವ ಈ ಬಳ್ಳಿಯನ್ನು ರೈತರು ಸೌದೆ, ಹುಲ್ಲು ಮುಂತಾದವುಗಳನ್ನು ಹೊರೆ ಕಟ್ಟಲು ಬಳಸುತ್ತಾರೆ. ಈ ಬಳ್ಳಿಗಳನ್ನು ಕೊಯ್ದು ತಿಪ್ಪೆಗೆ ಹಾಕಿ ಹಸಿರು ಗೊಬ್ಬರ ತಯಾರಿಸುವುದು ವಿಶೇಷ.

ರೈತರು ತಮ್ಮ ಜಮೀನು ಪಕ್ಕದಲ್ಲಿ ಬೆಳೆದ ಉಗನಿ ಬಳ್ಳಿಯನ್ನು ಉಳಿಸಿಕೊಳ್ಳುವ ಸಂಪ್ರದಾಯ ಮುಂದುವರಿದಿದೆ. ಯಾವುದೇ ಕಾಲದಲ್ಲೂ ಹೊರೆ ಕಟ್ಟಲು ಸಿಗುವ ಬಳ್ಳಿ ಕೃಷಿಕರಿಗೆ ಹೆಚ್ಚು ಉಪಯುಕ್ತ. ಸಾಂಪ್ರದಾಯಿಕ ರಾಗಿ ಹೊಲದಲ್ಲಿ ಬೇರೆ ಬೇರೆ ಬೆಳೆಗಳು ಬೇರೆ ಬೇರೆ ಕಾಲದಲ್ಲಿ ಕೊಯ್ಲಿಗೆ ಬರುತ್ತವೆ. ಸಾಸಿವೆ, ಹುಚ್ಚೆಳ್ಳು, ಜೋಳ, ಸಾಮೆ, ಸಜ್ಜೆ, ನವಣೆ, ಅವರೆ ಗಿಡಗಳನ್ನು ಕೊಯ್ದು ಕಟ್ಟಿ ಮನೆಗೆ ಸಾಗಿಸುವ ಸಂದರ್ಭದಲ್ಲಿ ಈ ಬಳ್ಳಿ ಉಪಯೋಗಿಸುತ್ತಾರೆ.

ADVERTISEMENT

ಹಿಂದೆ ಬೇಸಾಯ ನಡೆಸುತ್ತಿದ್ದ ಕಾಲದಲ್ಲಿ ರೈತರು ಉಗನಿ ಬಳ್ಳಿಯನ್ನು ಕೊಯ್ದು ಕೆಸರು ಗದ್ದೆಯಲ್ಲಿ ತುಳಿದು, ಭತ್ತದ ಪೈರು ನಾಟಿ ಮಾಡುತ್ತಿದ್ದರು. ಬಳ್ಳಿ ಬೇಗ ಕೊಳೆತು ಬೆಳೆ ಹುಲುಸಾಗಿ ಬೆಳೆಯುತ್ತಿತ್ತು. ಇದರಿಂದಾಗಿಯೇ ಕೆಲವು ಕಡೆ ಕೆಲವು ಶತಮಾನಗಳಷ್ಟು ಹಳೆಯದಾದ ಉಗನಿ ಬಳ್ಳಿಯ ಬುಡಗಳು ಕಂಡುಬರುತ್ತವೆ.

ಉಗನಿ ಬಳ್ಳಿಗೆ ಸಾಂಸ್ಕೃತಿಕ ಮಹತ್ವವೂ ಇದೆ. ಕೆಲವು ಧಾರ್ಮಿಕ ವಿಧಿಗಳನ್ನು ನೆರವೇರಿಸುವಾಗ, ಉಗನಿ ಎಲೆಯಲ್ಲಿ ತಣಿವು ಮುದ್ದೆ ಇಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಉಗನಿ ಎಲೆಯಲ್ಲಿ ಎಡೆ ಹಾಕುವುದುಂಟು. ದೃಷ್ಟಿ ನಿವಾರಣೆಗೆ ಉಗನಿ ಎಲೆಯನ್ನು ಇಳಿ ತೆಗೆದು ಎಸೆಯುವುದು ಸಹ ರೂಢಿಯಲ್ಲಿದೆ.

ಉಗನಿ ಅತ್ಯಂತ ವೇಗವಾಗಿ ಬೆಳೆಯುವ ಒಂದು ಬಳ್ಳಿ. ಆಶ್ರಯ ಸಿಕ್ಕಿದರೆ ಎಷ್ಟು ಎತ್ತರಕ್ಕಾದರೂ ಏರಬಲ್ಲದು. ಆದ್ದರಿಂದಲೇ ಈ ಬಳ್ಳಿ ಸಿಕ್ಕಿದ ಗಿಡ, ಮರ ಹಾಗೂ ಪೊದೆಗಳ ನೆತ್ತಿಗೆ ಹತ್ತುತ್ತದೆ. ಕಾಡು ಮೇಡು ಸುತ್ತುವವರಿಗೆ ಈ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಈಗಂತೂ ಹೂಗಳ ರಾಣಿಯ ಮಂದಹಾಸ ಉಗನಿ ಬಳ್ಳಿಯಲ್ಲಿ ಮಿಂಚುತ್ತಿದೆ.

ಔಷಧ ಸಸ್ಯವೂ ಹೌದು

ದನಕರುಗಳಿಗೆ ಬಾವು ಬಂದಾಗ ಉಗನಿ ಎಲೆಯನ್ನು ಬೆಂಕಿಯಲ್ಲಿ ಬಿಸಿ ಮಾಡಿ ಬಾವು ಬಂದ ಭಾಗದ ಮೇಲೆ ಹರಡಿ ಕಟ್ಟುತ್ತಾರೆ. ಸೊಂಟ ನೋವಿಗೆ ಉಗನಿ ಎಲೆಯನ್ನು ಸೊಂಟದ ಸುತ್ತಲೂ ಕಟ್ಟಿಕೊಂಡು ಮಲಗುವುದು ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಹೊಲ ಗದ್ದೆಗಳ ಕಡೆ ಹೋಗುವ ಮಂದಿ ಮುಳ್ಳು ತುಳಿಯುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಮುಳ್ಳು ತೆಗೆಯುವಾಗ ನೋವು ನಿವಾರಣೆಗೆ ಉಗನಿ ಬಳ್ಳಿಯ ಹಾಲನ್ನು ಗಾಯದ ಮೇಲೆ ಹಾಕುತ್ತಾರೆ. ಇದರಿಂದಾಗಿ ನೋವು ಕಡಿಮೆ ಆಗುತ್ತದೆ.

ಜನಪದ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ

ಕೆಲವರು ಸುಗ್ಗಿ ಕಾಲದಲ್ಲಿ ಗೌರಿಯ ಗೊಂಬೆಯನ್ನು ಹೆಡಿಗೆಯಲ್ಲಿಟ್ಟು ಉಗನಿ ಹೂಗಳಿಂದ ಗೊಂಬೆ ಅಲಂಕರಿಸುತ್ತಾರೆ. ಮನೆ ಮನೆಯ ಮುಂದಿರಿಸಿ, ಜನಪದ ಗೀತೆಗಳನ್ನು ಹಾಡಿ ದವಸ ಧಾನ್ಯ ಬೇಡುತ್ತಾರೆ. ಜನಪದ ಸಾಹಿತ್ಯದಲ್ಲಿ ಉಗನಿ ಹೂವಿಗೆ ಪ್ರಮುಖ ಸ್ಥಾನವಿದೆ. ಉಗನಿ ಹೂವನ್ನು ವರ್ಣಿಸಿರುವ ಹಾಡುಗಳಿಗೆ ಬರವಿಲ್ಲ. ಗಬ್ಬೀಯಾಳು ಪದ ಹಾಡುವ ಮಹಿಳೆಯರ ಹಾಡುಗಳಲ್ಲಿ ಉಗನಿ ಹೂವಿನ ಮಹತ್ವದ ಕುರಿತು ಹೇಳಿರುವದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.