ADVERTISEMENT

ಜಯಂತ್ಯುತ್ಸವ ಪ್ರತಿಭಟನೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 8:51 IST
Last Updated 2 ಫೆಬ್ರುವರಿ 2018, 8:51 IST

ಶ್ರೀನಿವಾಸಪುರ: ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿ ರಸ್ತೆ ತಡೆ ಹಾಗೂ ಪ್ರತಿಭಟನೆಯಲ್ಲಿ ಕೊನೆಗೊಂಡಿತು.

ಬೆಳಿಗ್ಗೆ ತಾಲ್ಲೂಕು ಕಚೇರಿ ಆವರಣದಿಂದ ತಡವಾಗಿ ಹೊರಟ ಮಾಚಿದೇವರ ಭಾವ ಚಿತ್ರ ಮೆರವಣಿಗೆಯ ಮುಂಚೂಣಿಯಲ್ಲಿ ಬೆಳ್ಳಿ ರಥ ಇದ್ದಿತು. ಅದರ ಹಿಂದೆ ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳಿಂದ ತರಲಾಗಿದ್ದ ಭಾವ ಚಿತ್ರ ಪಲ್ಲಕ್ಕಿಗಳು ಸಾಗಿದ್ದವು. ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ಮುಗಿಸಿ ತಾಲ್ಲೂಕು ಕಚೇರಿ ಬಾಗಿಲು ಬಳಿ ಬಂದಾಗ ಮೆರವಣಿಗೆಯಲ್ಲಿದ್ದವರು, ತಾಲ್ಲೂಕು ಆಡಳಿತ ಜಯಂತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಪಾದಿಸಿ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು.

ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ, ಪ್ರತಿಭಟನಕಾರರು ಧಿಕ್ಕಾರ ಕೂಗಿದರು. ಪೊಲೀಸರು ಅವರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು. ಅಲ್ಲಿಂದ ತಾಲ್ಲೂಕು ಕಚೇರಿ ಆವರಣಕ್ಕೆ ಬಂದ ಪ್ರತಿಭಟನಕಾರರು, ತಾಲ್ಲೂಕು ಕಚೇರಿ ಬಾಗಿಲು ಮುಚ್ಚಿ ಪ್ರತಿಭಟಿಸಿದರು. ಸಮಾರಂಭ ನಡೆಯಬೇಕಾಗಿದ್ದ ತಾಲ್ಲೂಕು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಅಗತ್ಯ ಸಂಖ್ಯೆಯ ಆಸನಗಳ ವ್ಯವಸ್ಥೆ ಮಾಡಿಲ್ಲ. ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಮಾಡಿಲ್ಲ. ಪೆಂಡಾಲ್‌ ಹಾಕಿಲ್ಲ ಎಂದು ಮುಖಂಡರು ದೂರಿದರು.

ADVERTISEMENT

ಪ್ರತಿಭಟನೆ ನಡೆಯುತ್ತಿದ್ದ ವೇಳೆ ಊಟ ಬಂದಿತ್ತಾದರೂ, ಮುನಿದ ಮುಖಂಡರು ಊಟಕ್ಕೆ ಹೋಗುವ ಮನಸ್ಸು ಮಾಡಲಿಲ್ಲ. ಸಮುದಾಯದ ಇತರರೂ ಆ ಕಡೆ ಹೋಗಲಿಲ್ಲ. ಉಪ ತಹಶೀಲ್ದಾರ್‌ ಕೆ.ಎನ್.ಸುಜಾತ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಬಿ.ಅರ್‌.ಜಗದೀಶ್‌ ಸ್ಥಳಕ್ಕೆ ಬಂದು, ಪ್ರತಿಭಟನೆಕಾರರ ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ತಾಲ್ಲೂಕು ಶಿಕ್ಷಕರ ಭವನದಲ್ಲಿ ನಡೆಯಬೇಕಾಗಿದ್ದ ಸಮಾರಂಭ ನಡೆಯಲಿಲ್ಲ.

ದಲಿತರ ಆಕ್ಷೇಪ: ಮಡಿವಾಳ ಮಾಚಿದೇವರ ಜಯಂತಿ ಸಂದರ್ಭದಲ್ಲಿ, ತಾಲ್ಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದೆ ತಾಲ್ಲೂಕು ರಾಷ್ಟ್ರೀಯ ಹಬ್ಬಳ ಆಚರಣಾ ಸಮಿತಿ ಪ್ರಮಾದ ಎಸಗಿದೆ ಎಂದು ದಲಿತ ಮುಖಂಡರಾದ ರಾಮಾಂಜಮ್ಮ ಹೇಳಿದರು.

ಸರ್ಕಾರ ಪರಿಶಿಷ್ಟ ಜಾಗಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಸೌಲಭ್ಯಗಳನ್ನು ಇತರ ಸಮುದಾಯಗಳಿಗೆ ವರ್ಗಾಯಿಸಬಾರದು. ಮಹಾನ್‌ ವ್ಯಕ್ತಿಗಳ ಜಯಂತಿಗಳನ್ನು ಜಾತಿ ಭೇದ ಮಾಡದೆ ಎಲ್ಲರೂ ಸೇರಿ ಆಚರಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು. ದಲಿತ ಮುಖಂಡರು ಇದ್ದರು. ರಮೇಶ್‌, ಕಾರ್ಯದರ್ಶಿ ಮುರಳಿ ಮೋಹನ್‌, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.