ADVERTISEMENT

ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 9:04 IST
Last Updated 12 ಫೆಬ್ರುವರಿ 2018, 9:04 IST

ಕೋಲಾರ: ‘ಜೀವನದಲ್ಲಿ ಕನಸು, ಗುರಿಗಳನ್ನು ಹೊಂದಿದವರು ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಆಪ್ತ ಕಾರ್ಯದರ್ಶಿ ಸಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ನಗರದಲ್ಲಿ ಯೋಗಿನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್‌ ವತಿಯಿಂದ ಭಾನುವಾರ ನಡೆದ ಬಲಿಜ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ ಪ್ರತಿಭಾವಂತರಿಗೆ ಸ್ಥಿತಿವಂತರು ಆರ್ಥಿಕ ನೆರವು ನೀಡಬೇಕು. ಗುಣಮಟ್ಟದ ಶಿಕ್ಷಣ ಕೊಡಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಸಮುದಾಯದ ಸಂಘಟನೆಗಳ ಮೇಲಿದೆ ಎಂದು ಹೇಳಿದರು.

ಪ್ರತಿಯೊಬ್ಬರ ಸಾಧನೆಯ ಹಿಂದೆ ಶ್ರಮ ಇರುತ್ತದೆ. ಅದನ್ನು ಗುರುತಿಸುವಂತಹ ಕೆಲಸ ಆದಾಗ ಮಾತ್ರ ಪ್ರೋತ್ಸಾಹಿಸುವಂತಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗುವಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಭವಿಷ್ಯದಲ್ಲಿ ಕನಸುಗಳ ಸಾಧನೆಗೆ ಛಲವಿರಬೇಕು. ಹಗಲು ಕನಸಿನಿಂದ ಏನೊಂದು ಸಾಧನೆ ಮಾಡಲು ಸಾಧ್ಯವಿಲ್ಲ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಸ್ತು, ಸಂಯಮ, ಮೌಲ್ಯಗಳನ್ನು ಆಳವಡಿಸಿ ಕೊಳ್ಳುವಂತಾಗಬೇಕು ಎಂದು ಹೇಳಿದರು.

‘ನೈತಿಕತೆ ಇಲ್ಲದ ವಿದ್ಯಾಭ್ಯಾಸಕ್ಕೆ ಸಮಾಜದಲ್ಲಿ ಬೆಲೆ ಇಲ್ಲ. ಪೋಷಕರನ್ನು ಗೌರವಿಸಿದರೆ ಮಾತ್ರ ಸಮಾಜದಲ್ಲಿ ಗೌರವಸಿಗುತ್ತದೆ’ ಎಂದು ವಿದ್ವಾನ್ ಬಾಲಕೃಷ್ಣ ಭಾಗವತರ್ ತಿಳಿಸಿದರು.

ಜೀವನದ ದೃಷ್ಟಿಕೋನ ಎತ್ತರಕ್ಕೆ ಇದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ಕೆ.ಆರ್.ನಂದಿನಿ ಐಎಎಸ್‌ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದರಿಂದ ಸಾಧನೆ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಬಲಿಜ ಸಮುದಾಯದಲ್ಲಿ ಜಾತಿಯ ಪರವಾಗಿ ಯಾರು ಹೋರಾಟಗಳನ್ನು ಮಾಡಿರಲಿಲ್ಲ. ಪೆರಿಯಾರ್, ಶ್ರೀಕೃಷ್ಣದೇವರಾಯ, ಕೈವಾರ ತಾತಯ್ಯನವರು ಯಾರು ಸಹ ತಮ್ಮ ಸ್ವಜಾತಿ ಪರವಾಗಿ ಕೆಲಸ ಮಾಡದೆ ಸಮಾಜದ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ. ಜಾತಿ ರಾಜಕೀಯಕ್ಕೆ ಎಂದೂ ಮಾನ್ಯತೆ ನೀಡಿದವರಲ್ಲ. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಶೇ 25ರಷ್ಟು ಬಲಿಜ ಸಮುದಾಯದವರು ಇದ್ದರೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದರು.

ಸಾವಿತ್ರಿ ಬಾಯಿ ಫುಲೆ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿದರೆ ಹೊರತು ತಮ್ಮ ಜಾತಿಯ ಲಾಭಕ್ಕಾಗಿ ಹೋರಾಟ ಮಾಡಲಿಲ್ಲ. ಜಾತಿಯನ್ನು ತೊರೆದು ಶ್ರಮಿಸಿದವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಮೋಕ್ಷದ ಸಾಧನೆ ಮಾಡಿದವರು ಜಾತಿಗೆ ಸೇರಿದವನು ಎಂಬುದನ್ನು ತಾತಯ್ಯ ಹೇಳಿದ ಮಾತನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ನಗರಸಭೆ ಸದಸ್ಯರಾದ ಸುಕುಮಾರ್, ನಾರಾಯಣಮ್ಮ, ಎಸ್.ಎಸ್.ಶ್ರೀಧರ್, ಜಿ.ಎ.ಜಯರಾಮರೆಡ್ಡಿ, ವಿ.ಎನ್.ರಮಗನಾಥ್, ನಿವೃತ್ತ ಡಿವೈಎಸ್‌ಪಿ ವೆಂಕಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.