ADVERTISEMENT

ಅಕ್ರಮಕ್ಕೆ ಕಡಿವಾಣ: ತಂಡ ರಚನೆ

ಕ್ರಷರ್ ಘಟಕಗಳ ಪ್ರಕರಣ: ಐವರು ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 8:49 IST
Last Updated 30 ಮಾರ್ಚ್ 2015, 8:49 IST
ಗಂಗಾವತಿಯ ವೆಂಕಟಗಿರಿ ಗ್ರಾಮದ ಕ್ರಷರ್ ಘಟಕ (ಸಂಗ್ರಹ ಚಿತ್ರ)
ಗಂಗಾವತಿಯ ವೆಂಕಟಗಿರಿ ಗ್ರಾಮದ ಕ್ರಷರ್ ಘಟಕ (ಸಂಗ್ರಹ ಚಿತ್ರ)   

ಗಂಗಾವತಿ: ತಾಲ್ಲೂಕಿನ ವೆಂಕಟಗಿರಿ ಹೋಬಳಿ ವಿವಿಧ ಗ್ರಾಮಗಳ ಅಸುರಕ್ಷತಾ ವಲಯದಲ್ಲಿರುವ ಅನಧಿಕೃತ ಕ್ರಷರ್ ಘಟಕಗಳ ಚಟುವಟಿಕೆ ನಿಯಂತ್ರಿಸಲು ತಹಶೀಲ್ದಾರ್‌ ವೆಂಕನಗೌಡ ಆರ್.ಪಾಟೀಲ್ ಅವರು ಐವರು ಸಿಬ್ಬಂದಿಯನ್ನು ಒಳಗೊಂಡ ಜಾಗೃತ ತಂಡ ರಚಿಸಿ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಗಳನ್ನು ಉಲ್ಲಂಘಿಸಿದ್ದ ಕ್ರಷರ್ ಘಟಕಗಳಿಗೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ನೋಟಿಸ್ ನೀಡಿ ಬಂದ್ ಮಾಡಲು ಸೂಚನೆ ನೀಡಿದ್ದರು. ಆದರೆ ಘಟಕಗಳು ಅಕ್ರಮವಾಗಿ ರಾತ್ರಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ‘ಪ್ರಜಾವಾಣಿ’ ಮಾ. 27ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಕಂದಾಯ ನಿರೀಕ್ಷಕ ಸೈಯದ್ ರಹೇಮಾನ, ಗ್ರಾಮ ಲೆಕ್ಕಾಧಿಕಾರಿಗಳಾದ ಬಸವರಾಜ ವೆಂಕಟಗಿರಿ, ಚೆನ್ನಪ್ಪ ಬಸವಪಟ್ಟಣ, ವಾಹನ ಚಾಲಕ ಶಬ್ಬೀರ್ ಹಾಗೂ ಗ್ರಾಮ ಸಹಾಯಕ ವಾಲೇಕಾರ್ ಹನುಮಂತಪ್ಪ ಅವರನ್ನೊಳಗೊಂಡ ತಂಡವನ್ನು  ತಹಶೀಲ್ದಾರ್‌ ರಚಿಸಿದ್ದಾರೆ.

‘ಹೋಬಳಿ ವ್ಯಾಪ್ತಿಯಲ್ಲಿ 17 ಕ್ರಷರ್ ಘಟಕ ಇದ್ದು, ಕೇವಲ ನಾಲ್ಕು ಘಟಕಗಳು ಮಾತ್ರ ನಿಯಮ ಪಾಲಿಸುತ್ತಿವೆ. ಇನ್ನುಳಿದ 13 ಘಟಕಗಳು ರಸ್ತೆ, ಶಾಲೆ, ದೇವಸ್ಥಾನ, ಕೃಷಿ ವಲಯ ಮೊದಲಾದ ಸಾರ್ವಜನಿಕ ವಲಯಕ್ಕೆ ಹತ್ತಿರದಲ್ಲಿ ಚಟುವಟಿಕೆ ನಡೆಸುಸುವ ಮೂಲಕ ಕಾನೂನು ಉಲ್ಲಂಘಿಸಿವೆ.

ಅನಧಿಕೃತ ಘಟಕಗಳು ಹಗಲಿನಲ್ಲಿ ಚಟುವಟಿಕೆ ಸ್ಥಗಿತಗೊಳಿಸಿ, ರಾತ್ರಿ ಮತ್ತೆ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದೂರು ಕೇಳಿಬರುತ್ತಿವೆ.
ಜಾಗೃತ ತಂಡವು ನಿರಂತರ ಸ್ಥಳಕ್ಕೆ ಭೇಟಿ ನೀಡಿ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅಧಿಕಾರಿಗಳನ್ನು ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್‌  ವೆಂಕನಗೌಡ ಎಚ್ಚರಿಕೆ ನೀಡಿದ್ದಾರೆ.

‘ನಾವು ಹಗಲು ಕಾರ್ಯಾಚರಣೆ ಮಾಡುತ್ತೇವೆ. ಆದರೆ ರಾತ್ರಿ ಘಟಕ ಆರಂಭವಾಗುತ್ತಿವೆ. ನಮ್ಮನ್ನು ಬಲಿಪಶು ಮಾಡುವ ಬದಲಿಗೆ ವಿದ್ಯುತ್ ಸಂಪರ್ಕ ಸ್ಥಗಿತಕ್ಕೆ ತಹಶೀಲ್ದಾರ್ ಕ್ರಮಕೈಗೊಳ್ಳಬೇಕು’ ಎಂದು ಹೆಸರು ಹೇಳಲು ಬಯಸದ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.