ADVERTISEMENT

ಅಡುಗೆ ಅನಿಲ ಅಕ್ರಮ ವರ್ಗಾವಣೆ: ಆರೋಪ

ಎಂ.ಜೆ.ಶ್ರೀನಿವಾಸ
Published 24 ಏಪ್ರಿಲ್ 2017, 5:46 IST
Last Updated 24 ಏಪ್ರಿಲ್ 2017, 5:46 IST

ಗಂಗಾವತಿ: ತಾಲ್ಲೂಕಿನ ಕೊರಮ್ಮಕ್ಯಾಂಪ್‌ನಲ್ಲಿ (ಬಸವನದುರ್ಗಾ) ಗೃಹಬಳಕೆ ಸಿಲಿಂಡರ್ ಅನಿಲವನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಿತ ಸಿಲಿಂಡರ್‌ಗೆ ವರ್ಗಾಯಿಸುವ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದ ಜಾಲವನ್ನು ಸಾರ್ವಜನಿಕರೇ ಭಾನುವಾರ ಬಯಲಿಗೆಳೆದಿದ್ದಾರೆ.

ಈ ಬಗ್ಗೆ ವಿಡಿಯೊ ಮೂಲಕ ಸಾಕ್ಷಿ ಸಮೇತ ಸಾರ್ವಜನಿಕರು ಕಂಪೆನಿಯ ವ್ಯವಸ್ಥಾಪಕರಿಗೆ ದೂರು ನೀಡಿದ್ದಾರೆ.

ಗಂಗಾವತಿಯಲ್ಲಿ ಈಚೆಗೆ ಆರಂಭವಾದ ಗ್ಯಾಸ್ ಕಂಪೆನಿಯೊಂದರ ಉದ್ಯೋಗಿಗಳು ಈ ಕೃತ್ಯ ಮಾಡುತ್ತಿರುವುದನ್ನು ಈ ಹಿಂದೆ ಪತ್ತೆ ಮಾಡಿದ್ದ ಸಾರ್ವಜನಿಕರು, ಎಚ್ಚರಿಕೆ ನೀಡಿದ್ದರು.

ADVERTISEMENT

‘ಗ್ರಾಮದಿಂದ ಕೊಂಚ ದೂರವಿರುವ ದರ್ಗಾದ ಜನವಸತಿ ಪ್ರದೇಶದಲ್ಲಿ ಹಾಡಹಗಲೇ ಈ ಕಂಪೆನಿಯ ಉದ್ಯೋಗಿಗಳು, ಯಂತ್ರಗಳನ್ನು ಬಳಸಿ ಗೃಹಬಳಕೆಯ ಸಿಲಿಂಡರ್‌ನಿಂದ ವಾಣಿಜ್ಯ ಉದ್ದೇಶಿತ ಸಿಲಿಂಡರ್‌ಗೆ ಅನಿಲ ತುಂಬುವುದು ಕಂಡು ಹಿಡಿದಿದ್ದೇವೆ’ ಎಂದು ಗ್ರಾಮದ ಲಕ್ಷ್ಮಪ್ಪ ಎಂಬ ಯುವಕ ತಿಳಿಸಿದ್ದಾರೆ.

‘ಸಿಲಿಂಡರ್‌ಗಳಲ್ಲಿನ ಅನಿಲವನ್ನು ಅದಲು ಬದಲು ಮಾಡುವಾಗ ಆಕಸ್ಮಿಕ ಸ್ಫೋಟ ಸಂಭವಿಸಿದರೆ ಸುತ್ತಲಿನ ಜನವಸತಿ ಮೇಲೆ ಪರಿಣಾಮ ಬೀರಲಿದೆ. ಇದರ ಬಗ್ಗೆ ಮುಂಜಾಗ್ರತೆ ವಹಿಸಲು ಸಾಕಷ್ಟು ಬಾರಿ ಗ್ಯಾಸ್ ಕಂಪೆನಿಯವರಿಗೆ ಎಚ್ಚರಿಕೆ ನೀಡಿದ್ದೇವೆ. ಆದರೆ ಮತ್ತದೇ ಕೆಲಸ ಮಾಡಿದ್ದರಿಂದ ಸಾಕ್ಷಿ ಸಮೇತ ಹಿಡಿದಿದ್ದೇವೆ’ ಎಂದು ಯಮನೂರಪ್ಪ ತಿಳಿಸಿದರು.

‘ಅನಿಲ ವರ್ಗಾವಣೆ ಅಕ್ರಮದ ಬಗ್ಗೆ ಯುವಕರು ಆಹಾರ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ’ ಎಂದು ಸ್ಥಳೀಯರಾದ ಲಕ್ಷ್ಮವ್ವ, ಸಾವಿತ್ರಮ್ಮ, ಮಂಗಮ್ಮ  ಆರೋಪಿಸಿದರು.

‘₹ 305ಕ್ಕೆ ಸಬ್ಸಿಡಿಯುಕ್ತ 14.2 ಕೆಜಿಯ ಗೃಹ ಬಳಕೆ ಸಿಲಿಂಡರ್‌ಗೆ ಸರ್ಕಾರ ₹ 591 ದರ ನಿಗದಿ ಮಾಡಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ ದರ ₹1,451 ಇದೆ. ಗೃಹ ಬಳಕೆಯ 14.2 ಕೆಜಿ ಅನಿಲವನ್ನೆ ವಾಣಿಜ್ಯ ಸಿಲಿಂಡರ್‌ಗೆ ತುಂಬಿ ₹1500ಕ್ಕೆ ಮಾರಲಾಗುತ್ತಿದೆ. ಈ ಮೂಲಕ ಸರ್ಕಾರಕ್ಕೆ ವಂಚಿಸಲಾಗುತ್ತಿದೆ. ಆದರೆ ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಸಮಾಜಸೇವಾ ಸಂಘದ ಅಧ್ಯಕ್ಷ ಸಾಯಿರಾಂ ದೂರಿದ್ದಾರೆ.

**

ಕಂಪೆನಿ ಸಿಬ್ಬಂದಿ ಅನಿಲ ವರ್ಗಾವಣೆ ಮಾಡುತ್ತಿರು ವುದನ್ನು ವಿಡಿಯೊ ಸಮೇತ   ಯುವಕರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು.
-ಮಸ್ಕಿ ಮಂಜುನಾಥ, ವ್ಯವಸ್ಥಾಪಕ, ಲಕ್ಷ್ಮಿ ಗ್ಯಾಸ್ ಕಂಪೆನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.