ADVERTISEMENT

ಆರ್ಥಿಕ ಸಮಾನತೆಯಿಂದ ದಲಿತರ ಅಭಿವೃದ್ಧಿ

ದೇವದಾಸಿ ಪದ್ಧತಿ ಒಂದು ವಾಸ್ತವ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:01 IST
Last Updated 9 ಮಾರ್ಚ್ 2017, 7:01 IST
ಕೊಪ್ಪಳ:  ಆರ್ಥಿಕ ಸಮಾನತೆ ಸಾಧಿಸಿದಾಗ ಮಾತ್ರ ದಲಿತ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ದೇವದಾಸಿ ವಿಮೋಚನಾ ಚಳವಳಿಯ ಹೋರಾಟಗಾರ್ತಿ ಬಳ್ಳಾರಿಯ ಬಿ. ಮಾಳಮ್ಮ ಹೇಳಿದರು.
 
ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ದೇವದಾಸಿ ಪದ್ಧತಿ ಒಂದು ವಾಸ್ತವ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
 
ದಿನಗಳು ಬದಲಾದರೂ ಈ ಪದ್ಧತಿ ಕದ್ದುಮುಚ್ಚಿ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 80ರಿಂದ 90 ಸಾವಿರ ದೇವದಾಸಿ ಕುಟುಂಬಗಳು ಇವೆ. ಇವು ಇನ್ನೂ ಶೋಷಣೆಗೆ ಒಳಗಾಗಿವೆ. ಈ ಪದ್ಧತಿಯ ವಿರುದ್ಧ ಯಾವ ಜನಪ್ರತಿನಿಧಿಯೂ ಧ್ವನಿಯೆತ್ತಿಲ್ಲ. ಈ ಬಗ್ಗೆ ಹೋರಾಡುವಾಗ ನಾವು ಹೊಡೆತ ತಿಂದಿದ್ದೇವೆ. 
 
ಸಮಾಜದಲ್ಲಿ ದೇವದಾಸಿಯರ ಮಕ್ಕಳು ತುಳಿತಕ್ಕೊಳಗಾಗಿದ್ದಾರೆ. ಬಡತನ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕು. ಸಿಡಿ ಪದ್ಧತಿಯಿಂದಲೂ ಮುಕ್ತಿ ದೊರೆಯಬೇಕು. ದೇವದಾಸಿ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರ ವಹಿಸಿಕೊಳ್ಳಬೇಕು. ಸರ್ಕಾರ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ ನೀಡಬೇಕು. ಆಗ ಮಾತ್ರ ಈ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.   
 
ಮೂಢನಂಬಿಕೆಗೆ ಬಲಿಯಾದ ಬದುಕು
ಇನ್ನೊಬ್ಬ ಹೋರಾಟಗಾರ್ತಿ ಶೋಭಾ ಗಸ್ತಿ ಮಾತನಾಡಿ, ಮಾದಿಗ ಮತ್ತು ಛಲವಾದಿಯವರನ್ನಷ್ಟೇ ದೇವದಾಸಿಯನ್ನಾಗಿಸುತ್ತಾರೆ ಎಂದು ತಿಳಿದಿದ್ದೇನೆ. ಎಲ್ಲಮ್ಮನ ಜಾತ್ರೆ, ಪೂಜೆಗೆ ಎಲ್ಲಾ ಜಾತಿಯವರೂ ಹೋಗುತ್ತಾರೆ. ಆದರೆ, ಮಾದಿಗ ಮತ್ತು ಛಲವಾದಿಯವರನ್ನು ಮಾತ್ರ ಏಕೆ ದೇವದಾಸಿಯರನ್ನಾಗಿಸುತ್ತಾರೆ ಎಂಬ ಪ್ರಶ್ನೆ ಬಹಳ ಕಾಡಿದೆ ಎಂದರು. 
 
ತಮ್ಮ ಅನುಭವ ಹಂಚಿಕೊಂಡ ಗಸ್ತಿ, ನಮ್ಮ ಕುಟುಂಬದಲ್ಲಾದ ಸಮಸ್ಯೆ ಪರಿಹರಿಸಲು ಕೋರಿ ಊರಿನ ಪೂಜಾರಿಯ ಬಳಿ ಹೋದಾಗ ಆತ ನಿಮ್ಮ ಮಗಳನ್ನು ದೇವದಾಸಿಯನ್ನಾಗಿಸಬೇಕು. ಇಲ್ಲವಾದರೆ ಮಗ ಜೋಗಪ್ಪನಾಗುತ್ತಾನೆ ಎಂದೂ ಬೆದರಿಸಿದ. ಹಾಗೆ ವಂಶ ಉಳಿಸಿಕೊಳ್ಳುವ ಸಲುವಾಗಿ ತಾಯಿ ಮೂಢನಂಬಿಕೆಗೆ ಒಳಗಾಗಿ ತಾನು ಹಾಳಾಗಿದ್ದಲ್ಲದೆ ನನ್ನ ಜೀವನವನ್ನೂ ಹಾಳು ಮಾಡಿದರು. 
 
5ನೇ ತರಗತಿ ಇದ್ದಾಗಲೇ ಏನೂ ತಿಳಿಯದ ನನ್ನನ್ನು ದೇವದಾಸಿಯನ್ನಾಗಿ ಮಾಡಿದರು ಎಂದು ವಿವರಿಸಿದರು. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮೂಲಕ ಬೆಳಗಾವಿ ಜಿಲ್ಲೆಯನ್ನು ದೇವದಾಸಿ ಮುಕ್ತ ಜಿಲ್ಲೆಯನ್ನಾಗಿಸಿದ್ದೇವೆ. 
 
ಈಗ ಪ್ರತಿ ದೇವದಾಸಿ ಕುಟುಂಬದಲ್ಲಿ ಒಬ್ಬ ಅಧಿಕಾರಿ ಇದ್ದಾರೆ. ಪೋಕ್ಸೋ ಕಾಯ್ದೆ ಇಂಥ ಪದ್ಧತಿ ನಿಯಂತ್ರಿಸಲು ಸಹಕಾರಿಯಾಗಿದೆ. ಮೊದಲೇ ಈ ಕಾಯ್ದೆ ಬಂದಿರುತ್ತಿದ್ದರೆ ಇನ್ನೂ ಹೆಚ್ಚು ಮಹಿಳೆಯರು ಈ ಪದ್ಧತಿಯಿಂದ ಮುಕ್ತರಾಗುತ್ತಿದ್ದರು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.