ADVERTISEMENT

ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:53 IST
Last Updated 24 ಮೇ 2017, 5:53 IST
ಹನುಮಸಾಗರ ಸಮೀಪದ ಬಿಳೇಕಲ್‌ ಗ್ರಾಮದಲ್ಲಿ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಕಾಯುತ್ತಿರುವ ಜನರು
ಹನುಮಸಾಗರ ಸಮೀಪದ ಬಿಳೇಕಲ್‌ ಗ್ರಾಮದಲ್ಲಿ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಕಾಯುತ್ತಿರುವ ಜನರು   

ಹನುಮಸಾಗರ: ‘ಸಮೀಪದ ಬಿಳೇಕಲ್ ಗ್ರಾಮದಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿನ ತೊಂದರೆ ಎದುರಾಗಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಇಲ್ಲಿಯವರೆಗೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಸುಮಾರು 3 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಮೂರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸಣ್ಣ ಪ್ರಮಾಣದಲ್ಲಿ ನೀರು ಹೊಂದಿರುವ ಎರಡು ಖಾಸಗಿ ಕೊಳವೆ ಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಸುತ್ತಿದ್ದರೂ ಸಾಕಾಗುತ್ತಿಲ್ಲ’ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ.

‘ಗ್ರಾಮದ ಹೊರಭಾಗದಲ್ಲಿ ಕೊಳವೆಬಾವಿ ಕೊರೆಸಿದರೆ ನೀರು ಬರುವ ಸಾಧ್ಯತೆ ಇದೆ. ಆದರೆ ಗ್ರಾಮ ಪಂಚಾಯಿತಿ ನೀರು ಇಲ್ಲದ ಸ್ಥಳದಲ್ಲಿ ಮೇಲಿಂದ ಮೇಲೆ ಕೊಳವೆ ಬಾವಿ ಕೊರೆಸುತ್ತಿರುವುದರಿಂದ ಹಣ ವ್ಯರ್ಥವಾಗುತ್ತಿದೆ’ ಎಂದು ಗ್ರಾಮದ ಮುಖಂಡ ಭೀಮನಗೌಡ ಪಾಟೀಲ ತಿಳಿಸಿದರು.

ADVERTISEMENT

‘ಖಾಸಗಿ ಕೊಳವೆ ಬಾವಿಗಳಿಂದ ಕಿರು ನೀರು ತೊಟ್ಟಿಗೆ ಪೂರೈಕೆಯಾಗುವ ನೀರು ಸಾಕಾಗುತ್ತಿಲ್ಲ. ವಿದ್ಯುತ್‌ ಇರುವ ಸಮಯ ನೋಡಿ ದ್ವಿಚಕ್ರ ವಾಹನಗಳ ಮೂಲಕ ಸುತ್ತಲಿನ ತೋಟಗಳಿಂದ ನೀರು ತರಬೇಕಾಗಿದೆ’ ಎಂದು ಅಡಿವೆಪ್ಪ ಕಂಬಳಿ, ಸುಭಾಷ್‌ ಮ್ಯಾಗಳಮನಿ, ಪರಶುರಾಮ ಕಂಬಳಿ ಹೇಳಿದರು.

‘ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಎಂದು ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಕ್ರಮಕೈಕೊಂಡಿಲ್ಲ. ಎಲ್ಲ ಕೆಲಸ ಬದಿಗೊತ್ತಿ ಸರತಿಯಲ್ಲಿ ನಿಂತರೂ ನೀರು ಸಿಗುವುದಿಲ್ಲ’ ಎಂದು ವೃದ್ಧೆ ಶಾಂತಮ್ಮ ನೋವಿನಿಂದ ಹೇಳಿದರು.

‘ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ ಶಾಶ್ವತ ಕ್ರಮಕೈಕೊಳ್ಳಬೇಕು. ಅದಕ್ಕೂ ಮೊದಲು ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು’ ಎಂದು ಸಿದ್ದಪ್ಪ ಹಿರೇಹಾಳ, ರಾಮಪ್ಪ ಕಂಬಳಿ, ನಿಂಗಪ್ಪ ಕಂಬಳ, ಶರಣಪ್ಪ ರಾಮಸ್ವಾಮಿ ದ್ಯಾಮಣ್ಣವರ, ಕುಮಾರೆಪ್ಪ ಮುರಡಿ ಒತ್ತಾಯಿಸಿದರು.

* * 

ಸಾಮಾನ್ಯವಾಗಿ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾದರೆ, ನಮ್ಮ ಊರಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ ಇದೆ.
ಭೀಮನಗೌಡ ಪಾಟೀಲ,
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.