ADVERTISEMENT

ಕುಷ್ಟಗಿ: ಫೆ.25ರಂದು ಕೃಷಿ ಉತ್ಸವ, ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 10:46 IST
Last Updated 31 ಜನವರಿ 2015, 10:46 IST

ಕುಷ್ಟಗಿ: ಕೃಷಿಯಲ್ಲಿನ ನೂತನ ಆವಿಷ್ಕಾರ­ಗಳನ್ನು ರೈತರಿಗೆ ಪರಿಚಯಿ­ಸುವುದು ಮತ್ತು ಸಮಗ್ರ ಕೃಷಿಯಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡುವ ಮತ್ತು ವಸ್ತುಪ್ರದರ್ಶನಗಳನ್ನು ಒಳಗೊಂಡ ‘ಕೃಷಿ ಉತ್ಸವ’ ಫೆ.25 ರಂದು ಪಟ್ಟಣದ ಬುತ್ತಿಬಸ­ವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಶುಕ್ರವಾರ ಧರ್ಮಸ್ಥಳ ಗ್ರಾಮಾ­ಭಿವೃದ್ಧಿ ಯೋಜನೆ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಉತ್ಸವದಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ್ಯ­ಕ್ರಮಗಳು, ವಿಚಾರ­ಗೋಷ್ಠಿಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಒಂದು ದಿನ ಕೃಷಿ ಉತ್ಸವ ನಡೆಯಲಿದೆ ಎಂದು ತಿಳಿಸಲಾಯಿತು.

ಮಹಿಳಾ ಸಬಲೀಕರಣ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಜೊತೆಗೆ ತಾಲ್ಲೂಕು ಒಣ ಬೇಸಾಯ­ವನ್ನೇ ಅವಲಂಬಿಸಿ­ರುವುದರಿಂದ ಒಣ ಬೇಸಾಯದಲ್ಲಿ ರೈತರು ಅನುಸರಿಸ­ಬೇಕಾದ ಬೆಳೆ ವೈವಿಧ್ಯತೆ, ಮಣ್ಣಿನ ಸವಕಳಿ ತಡೆ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಭೂಮಿಯ ಫಲವತ್ತತೆ ಕಾಪಾಡು­ಸವುದಕ್ಕೆ ಸಂಬಂಧಿಸಿದ ವಿಚಾರಗಳು ಗೋಷ್ಠಿಗಳಲ್ಲಿ ಪ್ರಮುಖ­ವಾಗಿರಿಸಿ­ಕೊಳ್ಳುವಂತೆ ಸಲಹೆ ನೀಡಲಾಯಿತು.

ಅಲ್ಲದೇ ವಿವಿಧ ಇಲಾಖೆಗಳ ತಜ್ಞರ ಜೊತೆಗೆ ಸಾಧನೆಗೈದ ತಾಲ್ಲೂಕಿನ ಪ್ರಗತಿಪರ ರೈತರನ್ನು ಆಹ್ವಾನಿಸಿ ಅನುಭವ ವಿನಿಮಯ ಮಾಡಿಕೊಳ್ಳು­ವುದಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಉತ್ಸವದಲ್ಲಿ ಕೃಷಿಯಲ್ಲಿ ಬಳಕೆಯಾ­ಗುವ ಸುಧಾರಿತ ಯಂತ್ರೋಪ­ಕರಣಗಳು, ಹನಿ ನೀರಾವರಿಯಲ್ಲಿನ ಹೊಸ ತಂತ್ರಜ್ಞಾನದ ಸಲಕರಣೆಗಳು ಮತ್ತು ವಿವಿಧ ಇಲಾಖೆಗಳು, ಕಂಪೆನಿಗಳಿಗೆ ಸೇರಿದ ಮಾಹಿತಿ ಮಳಿಗೆಗಳಿಗೆ ಅವಕಾಶ ನೀಡಲು ಸಭೆ ನಿರ್ಣಯಿಸಿತು. ಅಲ್ಲದೇ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ರಾಷ್ಟ್ರೀಯ ದಾಳಿಂಬೆ ಬೆಳೆಗಾರರ ಸಂಘ ಉಪಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಬಸವರೆಡ್ಡಿ, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ಜಯತೀರ್ಥ ದೇಸಾಯಿ, ತೋಟಗಾರಿಕೆ ಅಧಿಕಾರಿ ಮಹಾದೇವಪ್ಪ ಕಮ್ಮಾರ, ಆರೋಗ್ಯ ಇಲಾಖೆಯ ಆರ್‌.ಎಸ್‌.ಇಂಚೂರು ಇತರೆ ಪ್ರಮುಖರು ಸಭೆಯಲ್ಲಿದ್ದರು. ಸಂಸ್ಥೆಯ ಯೋಜನಾಧಿರಿ ಸದಾಶಿವಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.