ADVERTISEMENT

ಕ್ರೀಡೆಯಿಂದ ಆರೋಗ್ಯ: ಅತ್ತಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 10:42 IST
Last Updated 28 ಫೆಬ್ರುವರಿ 2015, 10:42 IST
ಹನುಮಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಚೆಸ್‌ ಸ್ಪರ್ಧೆಗೆ ಮುಖ್ಯ ಶಿಕ್ಷಕ ಮಹ್ಮದ್‌ಅಲಿ ಅತ್ತಾರ  ಚಾಲನೆ ನೀಡಿದರು
ಹನುಮಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಚೆಸ್‌ ಸ್ಪರ್ಧೆಗೆ ಮುಖ್ಯ ಶಿಕ್ಷಕ ಮಹ್ಮದ್‌ಅಲಿ ಅತ್ತಾರ ಚಾಲನೆ ನೀಡಿದರು   

ಹನುಮಸಾಗರ: ವಿದ್ಯಾರ್ಥಿಗಳಿಗೆ ಪಠ್ಯ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆ ಕೂಡ ಮುಖ್ಯವಾಗಿದ್ದು ಈ ಉದ್ದೇಶದಿಂದಲೇ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕ್ರೀಡಾಕೂಟ ಏರ್ಪಡಿಸುತ್ತೇವೆ ಎಂದು ಮುಖ್ಯಶಿಕ್ಷಕ ಮಹ್ಮದ್‌ಅಲಿ ಅತ್ತಾರ ಹೇಳಿದರು.

ಶುಕ್ರವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರೌಢ ಶಾಲಾ ವಿಭಾಗದಲ್ಲಿ ಶಾಲಾ ವಾರ್ಷಿಕೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ  ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುವುದರಿಂದ ಎಲ್ಲ ವಯಸ್ಸಿನವರು ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಈಚೆಗೆ ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟಮಟ್ಟದಲ್ಲೂ ಪ್ರತಿಭೆ ತೋರಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದರು.

ಆರೋಗ್ಯ ಹಾಗೂ ದೈಹಿಕ ಶಿಕ್ಷಣ ವಿಭಾಗ ಶಿಕ್ಷಕ ರಾಜಾಭಕ್ಷಾರ ಪೆಂಡಾರಿ ಮಾತನಾಡಿ, ಚದುರಂಗ, ಜಂಪ್‌­ರೋಪ್‌ ಹಾಗೂ ಕರಾಟೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟ­ದ­ವರೆಗೂ ಸ್ಪರ್ಧಿಸಿದ್ದು ಇನ್ನುಳಿದ ವಿದ್ಯಾರ್ಥಿಗಳ ಸ್ಪೂರ್ತಿಗೆ ಕಾರಣವಾ­ಗಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಪಟು­ಗಳಿಗೆ ಗ್ರಾಮೀಣ ಮಟ್ಟದಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದರು.

ಚೆಸ್‌ ಸ್ಪರ್ಧೆಯಲ್ಲಿ ಮಹಿಬೂಬ ಹುಸೇನ್‌ ಮುಧೋಳ (ಪ್ರಥಮ), ಮಹಾಂತೇಶ (ದ್ವಿತೀಯ), ಷಟಲ್‌­ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಗತ್‌­ಸಿಂಗ್‌ ತಂಡ (ಪ್ರಥಮ), ಆಜಾದ್‌ ಚಂದ್ರಶೇಖರ ತಂಡ (ದ್ವಿತೀಯ), ಕಬಡ್ಡಿಯಲ್ಲಿ ಮಹಾತ್ಮಗಾಂಧಿ ತಂಡ (ಪ್ರಥಮ) ನೆಹರು ತಂಡ (ದ್ವಿತೀಯ) ಸ್ಥಾನ ಪಡೆದುಕೊಂಡವು.

ಸುಮಂಗಲಾ ತರಿಕೇರಿ, ಗೀತಾ ದೇವಾಂ­ಗಮಠ, ರೋಹಿಣಿ ಜ್ಯೋತಿ, ಮಹಾಂತೇಶ ಗೋನಾಳ, ಉಮಾ­ಕಾಂತ ರಜಪೂತ, ಎನ್‌.ಎಸ್‌.­ಹೂಲ­ಗೇರಿ, ಗುರುರಾಜ, ಬಾಳಪ್ಪ ಗುಡಗದ್ದಿ ಇದ್ದರು. ಮಂಜುನಾಥ ಸ್ವಾಗತಿಸಿದರು. ವಿಷ್ಣು ಭಂಡಾರಿ ನಿರೂಪಿಸಿದರು. ಸುಲೇಮಾನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.