ADVERTISEMENT

ಗುಜರಾತ್‌ ಫಲಿತಾಂಶ ಬಳಿಕ ಸಿದ್ದರಾಮಯ್ಯ ಮನೆಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 7:19 IST
Last Updated 16 ಡಿಸೆಂಬರ್ 2017, 7:19 IST
ಕಾರಟಗಿಯಲ್ಲಿ ಶುಕ್ರವಾರ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಚಾಲನೆ ನೀಡಿದರು
ಕಾರಟಗಿಯಲ್ಲಿ ಶುಕ್ರವಾರ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಚಾಲನೆ ನೀಡಿದರು   

ಕಾರಟಗಿ: ‘ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶ ಬಳಿಕ ಸಿದ್ದರಾಮಯ್ಯ ಮನಗೋಗುವುದು ಖಚಿತ ಆಗಲೇ ರಾಜ್ಯದಲ್ಲಿ ಅಚ್ಚೇ ದಿನ್‌ ಆರಂಭವಾಗುವುದು’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿದರು. ಇಲ್ಲಿನ ಪೊಲೀಸ್ ಠಾಣೆಯ ಎದುರು ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದರು.

‘ಪರಿವರ್ತನಾ ಯಾತ್ರೆಗೆ ಸೇರುತ್ತಿರುವ ಜನರನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮನಬಂದಂತೆ, ಮಾತನಾಡುತ್ತಾ ತಮ್ಮ ಹತಾಶೆಯನ್ನು ಹೊರ ಹಾಕುತ್ತಿದ್ದಾರೆ. ಅವರ ಮಾತನ್ನು ಕೇಳಿದವರಿಗೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿಸಿಕೊಂಡಂತಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ಸಾಲದ ಹೊರೆಯ ಭಾರ ಹಾಕಿದೆ. ಹಣ, ಹೆಂಡ ಹಾಗೂ ತೋಳ್ಬಲದಿಂದ ಇರವು ಅನುದಾನಗಳನ್ನು ದುರುಪಯೋಗ ಮಾಡಿಕೊಳ್ಳುವ, ಭ್ರಷ್ಟ ಸಚಿವರನ್ನು ರಕ್ಷಿಸುವ, ಪಾಪದ ಹಣದಲ್ಲಿ ಚುನಾವಣೆ ಎದುರಿಸುವ ಸನ್ನಾಹದಲ್ಲಿದ್ದಾರೆ’ ಎಂದು ಆರೋಪಿಸಿದರು.

ಹಿಂದುಳಿದ, ದಲಿತ, ಪರಿಶಿಷ್ಟರ ಹಿತ ಮರೆತು ಅವರ ಹೆಸರಲ್ಲಿ ತುಘಲಕ್ ದರ್ಬಾರ್ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮೇನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ರಾಜ್ಯ ಹಾಗೂ ಗುಜರಾತ್‌ ಚುನಾವಣೆ ಬಳಿಕ ರಾಷ್ಟ್ರವು ಕಾಂಗ್ರೆಸ್ ಮುಕ್ತವಾಗಲಿದೆ. ಕಳಸಾ -ಬಂಡೂರಿ ಸಮಸ್ಯೆ 10 ದಿನಗಳೊಳಗೆ ಇತ್ಯರ್ಥವಾಗಲಿದೆ. ಪ್ರಧಾನಿ ಮೋದಿ ವಿರುದ್ಧ ಟೀಕಿಸುವ ಸಿದ್ದರಾಮಯ್ಯ ಒಬ್ಬ ಬಚ್ಚಾ ಎಂದು ಕುಟುಕಿದ ಅವರು, ಎಸಿಬಿ, ಸಿಒಡಿ ಮೂಲಕ ಕ್ಲೀನ್ ಚಿಟ್ ಪಡೆದಿದ್ದಾರಾದರೂ ತಾವು ಅಧಿಕಾರಕ್ಕೆ ಬಂದ ಬಳಿಕ ಮರು ತನಿಖೆಗೆ ಆದೇಶಿಸುವುದಾಗಿ ಹೇಳಿದರು.

ADVERTISEMENT

ರಾಜ್ಯದಲ್ಲೇ ಮೊದಲ ಫಲಿತಾಂಶ ಕನಕಗಿರಿ ಕ್ಷೇತ್ರದ ಬಸವರಾಜ್ ದಡೇಸೂಗುರು ಅವರನ್ನು ಗೆಲ್ಲಿಸುವುದರೊಂದಿಗೆ ದಾಖಲೆ ಬರೆಯಿರಿ ಎಂದಾಗ ನೆರೆದ ಜನಸ್ತೋಮದಿಂದ ಕೇಕೆ, ಜಯಕಾರ ಮುಗಿಲು ಮುಟ್ಟಿತ್ತು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ. ಎಸ್. ಈಶ್ವರಪ್ಪ, ಕೇಂದ್ರದ ಮಾಜಿ ಸಚಿವೆ ಡಿ. ಪುರಂದರೇಶ್ವರಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದರಾದ ಬಿ. ಶ್ರೀರಾಮುಲು, ಕರಡಿ ಸಂಗಣ್ಣ, ಶಾಸಕ ಸಿ. ಟಿ. ರವಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ದಡೇಸೂಗೂರ್, ಎಸ್ಸಿ ಮೋರ್ಚಾ ಕಾರ್ಯದರ್ಶಿ ಮುಕುಂದರಾವ್ ಭವಾನಿಮಠ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾಋದ ದುರಾಡಳಿಕ್ಕೆ ಕೊನೆ ಹಾಡಿ, ಬದಲಾವಣೆ ಮಾಡಿರಿ ಎಂದು ಕರೆ ನೀಡಿದರು.

ಶಾಸಕ ದೊಡ್ಡನಗೌಡ, ರಘುನಾಥ ವಲ್ಕಾಪುರೆ, ಹಾಲಪ್ಪ ಆಚಾರ್ಯ, ಅಶ್ವಥ್ ನಾರಾಯಣ, ಜಿ. ವೀರಪ್ಪ ಕೇಸರಹಟ್ಟಿ, ಶಿವರಾಮಗೌಡ, ಲಂಕೇಶ್ ಗುಳದಾಳ, ಜಿ. ತಿಮ್ಮಾರೆಡ್ಡಿ ಗಿಲ್ಲೆಸೂಗುರು, ಶಿವಶರಣೆಗೌಡ, ಸತ್ಯನಾರಾಯಣ ದೇಶಪಾಂಡೆ, ಸ್ವಾತಿ ಜಿ. ರಾಮಮೋಹನ್, ಭಾಗ್ಯವತಿ ಮಾಣಿಕ್ ಭೋಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.