ADVERTISEMENT

ಚಂದಾಲಿಂಗ ದೇಗುಲ ಸರ್ಕಾರದ ಸುಪರ್ದಿಗೆ

ಚಂದ್ರಗಿರಿ ಗ್ರಾಮದ ಐವರಿಗೆ ಪೂಜೆ ಸಲ್ಲಿಸಲು ತಾತ್ಕಾಲಿಕ ಅವಕಾಶ ನೀಡಿದ ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:22 IST
Last Updated 23 ಮಾರ್ಚ್ 2017, 8:22 IST

ಹನುಮಸಾಗರ:  ಸಮೀಪದ ಐತಿಹಾಸಿಕ ಚಂದಾಲಿಂಗೇಶ್ವರ ದೇವಸ್ಥಾನವನ್ನು ನ್ಯಾಯಾಲಯದ ಆದೇಶದಂತೆ ಮಂಗಳವಾರ ತಹಶೀಲ್ದಾರ್‌ ಎಂ.ಗಂಗಪ್ಪ ಅವರು ಮನ್ನೇರಾಳ ಮತ್ತು ಬೀಳಗಿ ಗ್ರಾಮಗಳ ಮುಖಂಡರ ಸಮಕ್ಷಮ ಸರ್ಕಾರದ ವಶಕ್ಕೆ ಪಡೆದುಕೊಂಡರು. ದೇವಸ್ಥಾನದ ಸ್ಥಿರ ಮತ್ತು ಚರಾಸ್ತಿಗಳ ಪಟ್ಟಿ ಮಾಡಿ ಪೊಲೀಸರ ಬಂದೋಬಸ್ತ್‌ನಲ್ಲಿ ವಶಕ್ಕೆ ಪಡೆದರು.

ಈ ದೇವಸ್ಥಾನ ನಮ್ಮ ಗ್ರಾಮಕ್ಕೆ ಸಂಬಂಧಿಸಿದ್ದು ಎಂದು ಮನ್ನೇರಾಳ ಮತ್ತು ಬೀಳಗಿ ಗ್ರಾಮಸ್ಥರು ಹೇಳುತ್ತಿದ್ದರು. ತಮ್ಮ ಗ್ರಾಮದ ಪೂಜಾರಿಗಳೇ ಅಲ್ಲಿ ಪೂಜೆ ಮಾಡಬೇಕು ಎಂದು ವಾದಿಸಿದ್ದರು. ಎರಡೂ ಗ್ರಾಮಗಳ ಜನ ಮತ್ತು ಪೂಜಾರಿಗಳು ಕೋರ್ಟ್‌ ಮೆಟ್ಟಿಲೇರಿದ್ದರು. 20 ವರ್ಷದಿಂದ ದೇವಸ್ಥಾನದ ಮಾಲೀಕತ್ವ ಮತ್ತು ಅರ್ಚಕತ್ವ ವಿಷಯ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

ಎರಡೂ ಗ್ರಾಮಗಳ ಪೂಜಾರಿಗಳು ತಾವೇ ನೈಜವಾದ ಪೂಜಾರಿಗಳು ಎಂದು ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ತಿರ್ಮಾನಿಸಿದೆ. ಇದರಿಂದ ಕುಷ್ಟಗಿಯ ಸಿವಿಲ್ ನ್ಯಾಯಾಲಯದ ಯಾವುದೇ ಮಧ್ಯಂತರ ಆದೇಶವೂ ಇಲ್ಲ.

ಧಾರವಾಡ ಹೈಕೋರ್ಟ್‌ ಪೀಠದದಲ್ಲಿ ಪ್ರಕರಣ ವಿಚಾರಣೆಯ  ಹಂತದಲ್ಲಿದೆ. ಹೀಗಾಗಿ ಚಂದಾಲಿಂಗೇಶ್ವರ ದೇವಸ್ಥಾನ ಹಾಗೂ ಗಂಗ ಮಾಳಮ್ಮ ದೇವಸ್ಥಾನಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್‌ ಗಂಗಪ್ಪ ತಿಳಿಸಿದರು.

ಎರಡೂ ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ಪಡೆದಿರುವುದರಿಂದ ದೇವಸ್ಥಾನದ ಧಾರ್ಮಿಕ ಕಾರ್ಯಕ್ಕೆ ತೊಂದರೆ ಆಗಬಾರದು ಎನ್ನುವ ಉದ್ದೇಶವಿದೆ. ಈ ಬಗ್ಗೆ ಗ್ರಾಮಸ್ಥರು ಅಭಿಪ್ರಾಯ ತಿಳಿಸಬೇಕು ಎಂದು ತಹಶೀಲ್ದಾರ್‌ ಕೇಳಿದರು.

‘ಮನ್ನೇರಾಳದ ಮುಖಂಡರು ನಾವೇ ಪೂಜೆ ನೆರವೇರಿಸುತ್ತೇವೆ. ನಮಗೆ ಪೂಜೆ ನಡೆಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಬೀಳಗಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ‘ತಮ್ಮ ಗ್ರಾಮದಲ್ಲೂ ಪೂಜಾರಿಗಳಿದ್ದಾರೆ. ಅವರಿಗೆ ವಹಿಸಿ’ ಎಂದರು.

ಒಮ್ಮತ ಮೂಡದ ಕಾರಣ ಎರಡು ಗ್ರಾಮ ಹೊರತುಪಡಿಸಿ ಚಂದ್ರಗಿರಿ ಗ್ರಾಮದ ಐವರು ಪೂಜಾರಿಗಳ ನೇಮಿಸಿಕೊಳ್ಳಲು ತಹಶೀಲ್ದಾರ್ ತೀರ್ಮಾನಿಸಿದರು. ಇದಕ್ಕೆ ಉಭಯ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.

‘ದೇವರ ಹುಂಡಿಯಲ್ಲಿರುವ ಕಾಣಿಕೆ ಸರ್ಕಾರದ ಸ್ವತ್ತು. ಆರತಿತಟ್ಟೆಯಲ್ಲಿ ಬರುವ ಕಾಣಿಕೆ ಪೂಜಾರಿ ಸ್ವತ್ತು. ಎಲ್ಲ ಸ್ಥಿರ, ಚರಾಸ್ತಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ನೀಡಲಾಗುವುದು’ ಎಂದು ತಹಶೀಲ್ದಾರ್ ಗಂಗಪ್ಪ ತಿಳಿಸಿದರು. ಉಪ ತಹಶೀಲ್ದಾರ್ ಖಾಜಾಹುಸೇನ ನಾಡಗೌಡರ, ಕಂದಾಯ ನಿರೀಕ್ಷಕ ಮಹಮ್ಮದ ಮುಸ್ತಫಾ, ಸಿಪಿಐ ಗೀರೀಶ ರೋಡ್ಕರ, ಎಸ್ಐ ವಿಶ್ವನಾಥ ಹಿರೇಗೌಡ್ರ, ಮನ್ನೇರಾಳ ಬೀಳಗಿ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT