ADVERTISEMENT

‘ಚಳವಳಿಗಳಿಂದ ಬದಲಾವಣೆ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:35 IST
Last Updated 24 ನವೆಂಬರ್ 2017, 8:35 IST
ಕೊಪ್ಪಳದಲ್ಲಿ ಹಾಲ್ಕುರಿಕೆ ಡ್ರಾಮಾ ಸ್ಕೂಲ್‌ ವತಿಯಿಂದ ಬುಧವಾರ ವಿಠ್ಠಪ್ಪ ಗೋರಂಟ್ಲಿ ಅವರಿಗೆ ರಂಗಪುರಸ್ಕಾರ ನೀಡಲಾಯಿತು
ಕೊಪ್ಪಳದಲ್ಲಿ ಹಾಲ್ಕುರಿಕೆ ಡ್ರಾಮಾ ಸ್ಕೂಲ್‌ ವತಿಯಿಂದ ಬುಧವಾರ ವಿಠ್ಠಪ್ಪ ಗೋರಂಟ್ಲಿ ಅವರಿಗೆ ರಂಗಪುರಸ್ಕಾರ ನೀಡಲಾಯಿತು   

ಕೊಪ್ಪಳ: ‘ಚಳವಳಿ, ಹೋರಾಟಗಳಿಂದ ಭ್ರಷ್ಟರನ್ನು ವಿಮುಖಗೊಳಿಸಬಹುದು’ ಎಂದು ಹಿರಿಯ ಹೋರಾಟಗಾರ ಬಸವರಾಜ್ ಶೀಲವಂತರ್ ಹೇಳಿದರು. ಸಮೀಪದ ಭಾಗ್ಯನಗರದಲ್ಲಿ ಬುಧವಾರ ಹಾಲ್ಕುರಿಕೆ ಡ್ರಾಮಾ ಸ್ಕೂಲ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ರಂಗಭೂಮಿಯ ವಿದ್ಯಮಾನಗಳು ಕುರಿತ ವಿಚಾರ ಸಂಕಿರಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

’ಹಿಂದೆಂದಿಗಿಂತಲೂ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸಮಾಜದಲ್ಲಿ ಆಶಾಂತಿ ತಲೆದೋರಿದೆ. ಪ್ರಾಮಾಣಿಕ ಹೋರಾಟಗಾರರು ಸಮಾಜದ ಮುಖ್ಯ ನೆಲೆಗೆ ಬಂದು ಚಳವಳಿ ಕಟ್ಟಬೇಕಾಗಿದೆ. ಗೋರಂಟ್ಲಿ ಅವರು ಕಾವ್ಯ, ರಂಗಭೂಮಿ, ಸಾಹಿತ್ಯ, ಪತ್ರಿಕೆ, ಹೋರಾಟದ ನೆಲೆಗಳಿಂದ ತಮ್ಮ ವ್ಯಕ್ತಿತ್ವವನ್ನು ಸಮಗ್ರಗೊಳಿಸಿಕೊಂಡಿದ್ದಾರೆ’ ಎಂದರು.

ರಂಗಭೂಮಿಯ ವಿದ್ಯಮಾನಗಳ ಕುರಿತು ಮಾತನಾಡಿದ ಹಾಲ್ಕುರಿಕೆ ಶಿವಶಂಕರ್, ’ಜಾಗತಿಕ ಮಾರುಕಟ್ಟೆಯ ಚಿಂತನೆಗಳಿಂದ ಮನುಷ್ಯರು ಹಣದ ಬೆನ್ನು ಬಿದ್ದು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುವ ಹೊತ್ತಿನಲ್ಲಿ ರಂಗ ಚಿಂತನೆಯ ತಾತ್ವಿಕತೆಗಳು ಮನುಷ್ಯನಲ್ಲಿ ನೈತಿಕತೆಯ ಜೊತೆಗೆ ಸರಳ ಬದುಕಿನ ವ್ಯಕ್ತಿತ್ವದ ಹಾದಿಯನ್ನು ತೆರೆದುಕೊಳ್ಳುವಂತೆ ಮಾಡುತ್ತದೆ’ ಎಂದರು.

ADVERTISEMENT

ಮುಖ್ಯ ಅತಿಥಿಗಳಾಗಿ ವೀರಣ್ಣ ಹುರಿಕಡ್ಲಿ ಮಾತನಾಡಿ, ’ಸಾಂಸ್ಕೃತಿಕ ಮತ್ತು ರಂಗಭೂಮಿಯು ಮಕ್ಕಳನ್ನು ಕಲ್ಪನಾಶಕ್ತಿಯತ್ತ ಚಲಿಸುವಂತೆ ಮಾಡುತ್ತದೆ. ವಿಠ್ಠಪ್ಪ ಅವರ ತಾಯಿಯಲ್ಲಿದ್ದ ಸೇವಾ ಮನೋಭಾವ ಗೋರಂಟ್ಲಿ ಅವರಲ್ಲಿ ಬಂದಿದೆ. ಹಾಗಾಗಿ ಇಷ್ಟೊಂದು ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ’ ಎಂದರು.

ರಂಗಪುರಸ್ಕಾರ ಸ್ವೀಕರಿಸಿದ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ’ಕಷ್ಟಗಳು ಮನುಷ್ಯನನ್ನು ಅಲೋಚಿಸುವಂತೆ ಮಾಡುತ್ತವೆ. ಅತೀ ಹೆಚ್ಚು ಪೆಟ್ಟು ತಿಂದ ಕಲ್ಲು ಶಿಲೆಯಾಗುತ್ತದೆ. ಅದೇ ರೀತಿ ಸಾವಿರಾರು ಪೆಟ್ಟು ತಿಂದು ಈ ಸ್ಥಾನಕ್ಕೆ ಬಂದಿದ್ದೇನೆ. ಇಂದಿನ ಯುವಕರು ಮತ್ತು ಮಕ್ಕಳು ಕಷ್ಟಪಟ್ಟು ಜ್ಞಾನ ಸಂಪಾದಿಸಿಕೊಳ್ಳಬೇಕು. ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಹೋದ ಅನೇಕರು ತಮ್ಮ ಸೃಜನಾಶೀಲತೆ ಕಳೆದುಕೊಂಡಿದ್ದಾರೆ. ನಿಮ್ಮಲ್ಲಿ ಆರ್ಹತೆ ಇದ್ದರೆ ಅವೇ ಹುಡುಕಿಕೊಂಡು ಬರುತ್ತವೆ’ ಎಂದರು.

ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ವಿಮಲಪ್ಪ ಡಿ. ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಏಕನಾಥಪ್ಪ ದೇವದುರ್ಗ, ಪರಶುರಾಮ ದಲಬಂಜನ್, ಸಂಗೀತಗಾರ ರಾಮಚಂದ್ರಪ್ಪ ಉಪ್ಪಾರ್ ಇದ್ದರು. ಪ್ರಶಾಂತ್ ಎಸ್. ಮದ್ಲಿ ನಿರೂಪಿಸಿದರು. ದೇವ್ ನಾಯಕ್ ಸ್ವಾಗತಿಸಿದರು. ಶ್ರೀಕಾಂತ್ ಬಂಗಾರಿ ವಂದಿಸಿದರು.

* * 

ರಂಗಚಿಂತನೆಯ ತಾತ್ವಿಕತೆಗಳು ಮನುಷ್ಯನಲ್ಲಿ ಸರಳ ಬದುಕಿನ ವ್ಯಕ್ತಿತ್ವದ ಹಾದಿಯನ್ನು ತೆರೆದುಕೊಳ್ಳುವಂತೆ ಮಾಡುತ್ತದೆ
ಹಾಲ್ಕುರಿಕೆ ಶಿವಶಂಕರ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.