ADVERTISEMENT

ಜಾನುವಾರುಗಳಿಗೆ ಮೇವಿನ ಕೊರತೆ

ಬರಗಾಲದ ಛಾಯೆ: ಮೇವಿಗೆ ದುಬಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:22 IST
Last Updated 22 ಮಾರ್ಚ್ 2017, 9:22 IST

ಕುಕನೂರು: ಬಿರುಬೇಸಿಗೆಯ ಬಿಸಿಲು ತನ್ನ ಪ್ರಖರತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಹಳ್ಳ, ಕೊಳ್ಳಗಳಲ್ಲಿ ನೀರು ಇಲ್ಲದಂತಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಜತೆಯಲ್ಲಿ ಈಗ ಮೇವಿನ ಸಮಸ್ಯೆಯೂ ಎದುರಾಗಿದೆ.

ಮುಂದುವರಿದ ಬರಗಾಲ: ಬರಗಾಲದ ಪರಿಣಾಮವಾಗಿ ರೈತರು ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸತತ ಬರಗಾಲದ ಕಾರ್ಮೋಡ ಮುಂದುವರೆದಿದ್ದು, ಈ ವರ್ಷವೂ ಮಳೆ ಕೈಕೊಟ್ಟ ಪರಿಣಾಮ ಜನ-ಜಾನುವಾರು ಮೇವಿಲ್ಲದೆ ತತ್ತರಿಸಿ ಹೋಗಿದ್ದಾರೆ.

ಜೋಳದ ಮೇವಿಗೆ ಭರ್ಜರಿ ಬೆಲೆ:  ಮಳೆಯಿಲ್ಲದ ಪರಿಣಾಮ ಮೇವಿನ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದ್ದು, ಇದೀಗ ಮಾರುಕಟ್ಟೆಯಲ್ಲಿ ಮೇವಿಗೆ ಭರ್ಜರಿ ಬೆಲೆ ಬಂದಿದೆ. ಜಾನುವಾರುಗಳಿಗೆ ಅಗತ್ಯ ಮೇವು, ಕುಡಿಯುವ ನೀರು ಒದಗಿಸಲು ರೈತರು ಹರಸಾಹಸ ಪಡುವಂತಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯೂ ಜೋಳದ ಕಣಿಕಿಯ ಬೆಲೆ ಭಾರಿ ದುಬಾರಿಯಾಗಿದೆ. ಟ್ಯ್ರಾಕ್ಟರ್‌ ಒಂದು ಗಾಡಿಯ ಬೆಲೆ ಮಾರುಕಟ್ಟೆಯಲ್ಲಿ ₹ 7,000 ವರೆಗೂ ಮಾರಾಟವಾಗುತ್ತಿದೆ. ಜೋಳ ಬೆಳೆದ ಬಹುತೇಕ ರೈತರು ಕಣಕಿ ಕೊಡಲು ಒಪ್ಪುತ್ತಿಲ್ಲ. ಅವು ನಮ್ಮ ಜಾನುವಾರಗಳಿಗೆ ಬೇಕು ಎನ್ನುತ್ತಿದ್ದಾರೆ.

ಮೇವು ಸಿಗದ ಕಾರಣ ರೈತಾಪಿ ಜನರು ಮಾರುಕಟ್ಟೆಗೆ ಬಂದು ಜಾನುವಾರಗಳಿಗೆ ಅಗತ್ಯವಾದ ಹುಲ್ಲನ್ನು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲ ರೈತರು ಸಂತೆಗಳಲ್ಲಿ ತಮ್ಮ ಎತ್ತುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಗೋಶಾಲೆ ತೆರೆಯುವುದಾಗಿ ಹೇಳಿದ್ದ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಏನೂ ಮಾಡಿಲ್ಲ. ಸರ್ಕಾರವನ್ನು ನಂಬಿ ಕೂತರೆ ನಮ್ಮ ಹಸುಗಳು ಮೇವು ಇಲ್ಲದೇ ಸಾಯಬೇಕಾಗುತ್ತದೆ. ಬೆಲೆ ಹೆಚ್ಚಾದರೂ ನಾವೇ ಮಾರುಕಟ್ಟೆಯಲ್ಲಿ ಹಣ ಕೊಟ್ಟು ಮೇವು ಖರೀದಿ ಮಾಡುವ ಸ್ಥಿತಿ ಇದೆ ಎನ್ನುತ್ತಾರೆ ರೈತರು.

‘ಮೂರನಾಲ್ಕು ತಿಂಗಳಿಂದ ಮೇವಿನ ಕೊರತೆಯಿಂದ ಜಾನುವಾರುಗಳು ಬಳಲುತ್ತಿವೆ. ಮಳೆ ಇಲ್ಲದೇ ಇರುವುದರಿಂದ ಎಲ್ಲೂ ಹಸಿರು ಭೂಮಿಯೇ ಇಲ್ಲ. ಹೀಗಾಗಿ ಶೇಖರಿಸಿದ್ದ ಮೇವಿನಲ್ಲಿಯೇ ಇಲ್ಲಿಯವರೆಗೆ ಸಾಕಿದೆವು. ಆದರೆ ದಿನಗಳದಂತೆ ಅವುಗಳ ಆರೋಗ್ಯ ಹದಗೆಡುತ್ತಿದೆ ಎಂದು ಜಾನುವಾರು ಕಳೆದುಕೊಳ್ಳುವ ಭಯದಲ್ಲಿ ರೈತರು ಅಳಲು ತೋಡಿಕೊಂಡರು.

‘ಹೋಬಳಿಯ ಹತ್ತಾರು ಗ್ರಾಮದಲ್ಲಿ ಎತ್ತು, ಎಮ್ಮೆ, ಹಸು, ಆಡು, ಕುರಿ ಸೇರಿದಂತೆ ಸಾವಿರಾರು ಜಾನುವಾರು ಮೇವಿನ ಕೊರತೆಯಿಂದ ಬಡಕಲಾಗುತ್ತಿವೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಕೊಳ್ಳುವವರಿಲ್ಲ ಎಂದು ಶೇಖರಪ್ಪ ಹಂಚಿನಾಳ, ಮಲ್ಲಪ್ಪ ಹಳ್ಳಿ ಬರಗಾಲದ ಪರಿಸ್ಥಿತಿ ವಿವರಿಸಿದರು.
ರೈತರ ಸಾಲ ಮನ್ನಾ ಮಾಡಬೇಕು. ಹೋಬಳಿಯಲ್ಲಿ ಗೋ ಶಾಲೆಯನ್ನು ತೆರೆಯಬೇಕು ಎಂಬ ಆಗ್ರಹಕ್ಕೆ ಉಸ್ತುವಾರಿ ಸಚಿವರು ಬೆಲೆ ಕೊಡಲಿಲ್ಲ ಎಂದು ಅಂದಪ್ಪ ಕೋಳೂರು ಬೇಸರ ವ್ಯಕ್ತಪಡಿಸಿದರು.

*
ಬರಗಾಲದ ಕಾರ್ಮೋಡ ಜಾನುವಾರುಗಳ ಮೇಲೆ ಕವಿದಿದ್ದು, ಮೇವಿನ ಕೊರತೆಯಿಂದಾಗಿ ಜಾನುವಾರುಗಳು ಬಡಕಲಾಗುತ್ತಿವೆ.
-ಕಪ್ಪತಪ್ಪ ಅಂಗಡಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT