ADVERTISEMENT

ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಮಳೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:02 IST
Last Updated 15 ಮೇ 2017, 6:02 IST
ಹನುಮಸಾಗರ: ಸಮೀಪದ ತಳುವಗೇರಾದಲ್ಲಿ ಭಾನುವಾರ ಸಂಜೆ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಅಲ್ಲಲ್ಲಿ ಕೆರೆಯ ರೀತಿಯಲ್ಲಿ ಮಳೆ ನೀರು ತುಂಬಿ ನಿಂತಿದ್ದು ಕಂಡು ಬಂತು.
 
ಇದ್ದಕ್ಕಿದ್ದಂತೆ ಭಾರಿ ಗಾಳಿಯ ಸಮೇತ ಬಂದ ಮಳೆ ಅರೆಘಳಿಗೆಯಲ್ಲಿ ಕುಂಭದ್ರೋಣದ ಆಕಾರದಲ್ಲಿ ಸುರಿಯಿತು. ಮಳೆಯ ಹನಿಗಳಿಗಿಂತ ಆಲಿಕಲ್ಲುಗಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಕಾರಣ ಮಕ್ಕಳು ಅಂಗಳದಲ್ಲಿ ಚೆಲ್ಲಿದ್ದ ಆಲಿಕಲ್ಲುಗಳನ್ನು ಆಯ್ದುಕೊಂಡು ಖುಷಿ ಪಟ್ಟರು.
 
ಗ್ರಾಮದ ಕೆಲ ಮನೆಗಳಲ್ಲಿ ನೀರು ಹೊಕ್ಕಿರುವುದನ್ನು ಬಿಟ್ಟರೆ ಯಾವುದೇ ತೊಂದರೆಯಾಗಿಲ್ಲ. ಕೆಲ ಸಮಯದ ಅಂತರದಲ್ಲಿ ಎರಡು ಬಾರಿ ಮಳೆ ಸುರಿದಿರುವುದರಿಂದ ಕೆರೆಕಟ್ಟೆಗಳಲ್ಲಿ ಹಾಗೂ ಜಮೀನುಗಳಲ್ಲಿ ನೀರು ತುಂಬಿಕೊಂಡು ನಿಂತಿವೆ.
 
‘ಇದು ಮೊದಲನೆ ಮಳೆಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ. ಮುಂದಿನ ಮಳೆ ಇದೇ ರೀತಿ ಸುರಿದರೆ ಹಳ್ಳ ಹರಿಯುವಲ್ಲಿ ಸಂದೇಹವಿಲ್ಲ’ ಎಂದು ರೈತ ಶರಣಪ್ಪ ತಳುವಗೇರಿ ಹೇಳಿದರು.
 
ಬಿತ್ತನೆಗೆ ಇದು ಸೂಕ್ತವಾದ ಹಸಿ ಮಳೆಯಾಗಿದ್ದು, ನಾಳೆಯಿಂದಲೇ ಈ ಭಾಗದಲ್ಲಿ ಬಿತ್ತನೆ ಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ರೈತರು ಹೇಳಿದರು.
 ಕುಷ್ಟಗಿ ವರದಿ: ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಭಾನುವಾರ ಸಂಜೆ ಗುಡುಗು ಬಿರುಗಾಳಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ.
 
ದೋಟಿಹಾಳ, ತಳುವಗೇರಾ, ಶಿರಗುಂಪಿ, ಕೇಸೂರು, ಕ್ಯಾದಿಗುಪ್ಪಾ ಸುತ್ತಲಿನ ಪ್ರದೇಶದಲ್ಲಿ ಸುಮಾರು ಅರ್ಧಗಂಟೆಗೂ ಅಧಿಕ ಸಮಯದವರೆಗೆ ಮಳೆ ಬಂದಿದ್ದು, ಓಣಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಸಿಡಿಲಿನ ಅಬ್ಬರ ಜೋರಾಗಿತ್ತು ಎಂದು ರೈತರು ತಿಳಿಸಿದ್ದಾರೆ.
 
ತಳುವಗೇರಾ ಗ್ರಾಮದ ಸೀಮಾಂತರದಲ್ಲಿ ಆಲಿಕಲ್ಲಿನೊಂದಿಗೆ ಉತ್ತಮ ಮಳೆಯಾಗಿದ್ದರಿಂದ ಗ್ರಾಮದ ಬಳಿ ಇರುವ ಹಳ್ಳಕ್ಕೆ ನೀರು ಬಂದಿದೆ. ಕಳೆದ ಒಂದು ವರ್ಷದಿಂದಲೂ ಒಣಗಿಹೋಗಿದ್ದ ಹಳ್ಳಕ್ಕೆ ನೀರು ಬಂದಿರುವುದರಿಂದ ಪ್ರಾಣಿ, ಪಕ್ಷಿ ಸಂಕುಲಗಳಿಗೆ ಬಹಳಷ್ಟು ಅನುಕೂಲವಾಗಿದೆ. ತಗ್ಗುಗುಂಡಿ, ಹೊಲಗದ್ದೆಗಳ ಒಡ್ಡುಗಳಲ್ಲಿ ನೀರು ಸಂಗ್ರಹವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
 
ಈ ವರ್ಷ ಮೊದಲ ಮಳೆ ಬಂದಿರುವುದಕ್ಕೆ ಸಂತಸ ಹಂಚಿಕೊಂಡ ತಳುವಗೇರಾ ರೈತ ಅಂದಾನಗೌಡ ಪೊಲೀಸಪಾಟೀಲ, ನಿರೀಕ್ಷೆಯಲ್ಲಿದ್ದ ನಮಗೆ ಮಳೆ ಖುಷಿ ತಂದಿದೆ. ಹೊಲಗಳನ್ನು ಹದಗೊಳಿಸಲು ಅನುಕೂಲ ಕಲ್ಪಿಸಿದ್ದು ಮುಂಗಾರು ಹೆಸರು ಬಿತ್ತುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.