ADVERTISEMENT

ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವಾಗಲಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:56 IST
Last Updated 14 ಜುಲೈ 2017, 6:56 IST
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿ ಆಶಾ ಕಾರ್ಯಕರ್ತೆಯರಿಗೆ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ ಮಾತನಾಡಿದರು
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿ ಆಶಾ ಕಾರ್ಯಕರ್ತೆಯರಿಗೆ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ ಮಾತನಾಡಿದರು   

ಕೊಪ್ಪಳ:  ಜಿಲ್ಲೆ ಅ. 2ರ ಒಳಗೆ ಬಯಲು ಶೌಚ ಮುಕ್ತವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸ್ವಚ್ಛ ಭಾರತ ಅಭಿಯಾನದ ಅಡಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಶೌಚಾಲಯ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಇದೆ. ಮೂಲಸೌಲಭ್ಯಗಳಲ್ಲಿ ಶೌಚಾಲಯಕ್ಕೆ ಪ್ರಮುಖ ಸ್ಥಾನ ಇದೆ. ಬಸ್‌ ನಿಲ್ದಾಣ, ಆಸ್ಪತ್ರೆ, ಸಮುದಾಯ ಭವನ, ಕಲ್ಯಾಣ ಮಂಟಪ ಸೇರಿದಂತೆ ಅವಶ್ಯವಿರುವ ಕಡೆಗಳಲ್ಲಿ ಶೌಚಾಲಯಗಳನ್ನು ನಿರ್ಮಿ ಸಬೇಕು. ಬಯಲು ಬಹಿರ್ದೆಸೆಯಿಂದ ಅನೇಕ ರೋಗಗಳು ಹರಡುತ್ತವೆ. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಶೌಚಾಲಯ ಕಟ್ಟಿಕೊ ಳ್ಳಬೇಕು. ಬೇರೆಯವರಿಗೆ ಮನವೊಲಿಸಬೇಕು’ ಎಂದರು.

‘ಗರ್ಭಿಣಿ ಮತ್ತು ಬಾಣಂತಿಯರ ಮನೆಯಲ್ಲಿ ಶೌಚಾಲಯ ಕಟ್ಟಿಸುವುದು ಮುಖ್ಯ. ಪ್ರತಿಯೊಬ್ಬರೂ 10 ಶೌಚಾಲಯವನ್ನು ಕಟ್ಟಿಸಬೇಕು’ ಎಂದರು.ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀದೇವಿ ಗದ್ದಿನಕೇರಿ, ಎನ್‌.ಕೆ.ತೊರವಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್‌ ಬಿ.ವಿ. ಇದ್ದರು.

ADVERTISEMENT

ಕಾರ್ಯಕರ್ತೆಯರು– ಕಾರ್ಯನಿರ್ವಹಣಾಧಿಕಾರಿ ಜಟಾಪಟಿ: ಪ್ರತಿ ಶೌಚಾಲಯ ನಿರ್ಮಾಣದ ಪ್ರೇರಣೆಗೆ ₹ 150 ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಸಿಇಒ ಹೇಳಿದಾಗ ಕಾರ್ಯಕರ್ತೆಯರು ಪ್ರತಿಕ್ರಿಯಿಸಿ, ನಮಗೆ ಯಾವುದೇ ಪ್ರೋತ್ಸಾಹಧನ ಬಂದಿಲ್ಲ ಎಂದು ಹೇಳಿದರು.  ಈ ಉತ್ತರದಿಂದ ರೇಗಿದ ಸಿಇಒ ಮನಸ್ಸಿದ್ದರೆ ಕೆಲಸ ಮಾಡಿ. ಇಲ್ಲದಿದ್ದರೆ ಹೊರಗೆ ಹೋಗಿ ಎಂದರು.

‌‌ಆಗ ಎಲ್ಲ ಆಶಾ ಕಾರ್ಯಕರ್ತೆಯರು ಹೊರಗೆ ಹೋಗಲು ಮುಂದಾದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಅಲಕಾನಂದಾ ಕಾರ್ಯಕರ್ತೆಯ ರನ್ನು ಸಮಾಧಾನಪಡಿಸಿದರು. ‘ನೀವು ಶೌಚಾಲಯ ಕಟ್ಟಿಸಿರುವ ಬಗ್ಗೆ ವರದಿ ನೀಡಿ. ಆಗ ಹಣ ಪಾವತಿಸುತ್ತೇವೆ’ ಎಂದು ಸಿಇಒ ಹೇಳಿದರು.   

ಮಂಡಲಮುರಿ ಗ್ರಾಮ ಪಂಚಾಯಿ ತಿಯ ಕಾರ್ಯಕರ್ತೆ ಮಾತನಾಡಿ, ‘9 ತಿಂಗಳಾದರೂ ಶೌಚಾಲಯದ ಶುಲ್ಕ ಪಾವತಿಸಿಲ್ಲ. ಎಲ್ಲರಿಗೂ ಕಟ್ಟಿಸಿಕೊಳ್ಳುವ ಮನಸ್ಸಿದೆ. ಶುಲ್ಕ ನೀಡದಿರವುದರಿಂದ ಯಾರೂ ಪ್ರೇರೇಪಿಸಲು ಮುಂದಾ ಗುತ್ತಿಲ್ಲ. ಈ ಕುರಿತು ಸಿಇಒ ಅವರ ಗಮನಕ್ಕೂ ತಂದಿದ್ದೇವೆ.

ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಲಿಲ್ಲ’ ಎಂದರು. ಈ ಮಾತಿನಿಂದ ಸಿಇಒ ಮೌನವಾದರು. ಜಿಲ್ಲಾಪಂಚಾಯಿತಿ ಯೋಜನಾಧಿಕಾರಿ ರವಿ ಬಿಸರಳ್ಳಿ ಮಾತನಾಡಿ, ‘ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸುವುದರಿಂದ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಮಾಡಿರುವುದಿಲ್ಲ. ಖಾತೆ ಸಂಖ್ಯೆ ಬೇರೆ ಆಗಿರುತ್ತದೆ’ ಎಂದು ಸಮಜಾಯಿಸಿದರು.

‘ಅದು ನಮಗೂ ಗೊತ್ತಿದೆ. ನಾವು ಎಲ್ಲ ದಾಖಲೆಗಳನ್ನು ಸರಿಯಾಗಿ ನೀಡಿದ್ದೇವೆ. ಆದರೂ ಹಣ ಬಂದಿಲ್ಲ’ ಎಂದು ಕಾರ್ಯಕರ್ತೆಯರು ಮಾತಿನ ಚಾಟಿ ಬೀಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಸರಳ್ಳಿ, ‘ರಾಜ್ಯಮಟ್ಟದಲ್ಲಿ ಯೋಜನೆ ವಿಸ್ತರಿಸು ವುದರಿಂದ ಸ್ವಲ್ಪ ತೊಂದರೆ ಆಗಿದೆ. ಜಿಲ್ಲೆಯಲ್ಲಿ 100 ಶೌಚಾಲಯಗಳ ಶುಲ್ಕವಷ್ಟೆ ಪಾವತಿಸಬೇಕು. ನಿಮ್ಮ ಮಂಡಲಮುರಿ ಗ್ರಾ.ಪಂ ಯಲ್ಲಿ ನಡೆದ ವಿಷಯ ಹೇಳಲೇ’ ಎಂದು ಜೋರು ಧ್ವನಿಯಲ್ಲಿ ಹೇಳಿದಾಗ ಕಾರ್ಯಕರ್ತೆ ಸುಮ್ಮನಾದರು.

* * 

ಶೌಚಾಲಯ ಕಟ್ಟಿಸುವಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚು ಇದೆ. ನಿಮ್ಮ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಬದ್ಧ
ವೆಂಕಟರಾಜಾ
ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.