ADVERTISEMENT

ದೇವದಾಸಿ ಪದ್ಧತಿ ರೂಪ ಬದಲು, ನಿಂತಿಲ್ಲ

ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜೆ.ಹುನಗುಂದ ವಿಷಾದ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 11:25 IST
Last Updated 27 ನವೆಂಬರ್ 2015, 11:25 IST

ಕುಷ್ಟಗಿ: ಆರ್ಥಿಕ ದುರ್ಬಲತೆ ದೇವದಾಸಿಯಂಥ ಅನಿಷ್ಟ ಪದ್ಧತಿಗೆ ಮೂಲಕಾರಣವಾಗಿದ್ದು ಆರ್ಥಿಕ ಸಬಲೀಕರಣದಿಂದ ಮಾತ್ರ ಇಂಥ ವ್ಯವಸ್ಥೆಯಿಂದ ಹೊರಬರಲು ಸಾಧ್ಯ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜೆ.ಹುನಗುಂದ ಗುರುವಾರ ಇಲ್ಲಿ ಹೇಳಿದರು.

ವಿಮುಕ್ತ ದೇವದಾಸಿ ಮಹಿಳಾ ವೇದಿಕೆ, ದೇವದಾಸಿ ವಿಮೋಚನಾ ಜಿಲ್ಲಾ ನಾಗರಿಕ ಜಾಗೃತಿ ಸಮಿತಿ ಮತ್ತು ಕನಕಗಿರಿಯ ದೇವದಾಸಿ ಸಂಪನ್ಮೂಲ ಕೇಂದ್ರದ ವತಿಯಿಂದ ಪಟ್ಟಣದಲ್ಲಿ ನಡೆದ ದೇವದಾಸಿ ಪದ್ಧತಿ ನಿರ್ಮೂಲನೆ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇವದಾಸಿ ಪದ್ಧತಿಯ ರೂಪ ಬದಲಾಗಿದೆಯೆ ಹೊರತು ಪದ್ಧತಿ ಇನ್ನೂ ಮುಂದುವರೆದಿದೆ ಎಂಬುದು ಅಧ್ಯಯನ ವರದಿಯಿಂದ ತಿಳಿದುಬರುತ್ತದೆ. ದೇವದಾಸಿ ಪದ್ಧತಿಯಿಂದ ವಿಮುಕ್ತರಾದವರಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸಿಲ್ಲ. ಅಸಹಾಯಕರನ್ನು ಪೋಷಣೆ ಮಾಡುವುದಾಗಿ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಆದರೆ ಶೋಷಣೆ ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ದೇವದಾಸಿಯಂಥ ಅನಿಷ್ಟ ಪದ್ಧತಿ ಜೀವಂತವಾಗಿದೆ. ದೇವದಾಸಿ ಪದ್ಧತಿ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಇದ್ದರೆ ಕೊಪ್ಪಳ ನಂತರದ ಸ್ಥಾನದಲ್ಲಿದೆ.

ಸಮಾಜದ ಕ್ರೌರ್ಯಕ್ಕೆ ಬಲಿಪಶುಗಳಾಗಿರುವವರಿಗೆ ಜೀವಿಸುವ ಎಲ್ಲ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವ ಕರ್ತವ್ಯ ಜಿಲ್ಲಾಡಳಿತದ ಮೇಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಜೊತೆಗೆ ಐಪಿಸಿ ಕಲಂಗಳ ಮೂಲಕ ಇಂಥ ಅನಿಷ್ಟ ಪದ್ಧತಿ ಪ್ರೋತ್ಸಾಹಿಸುವುದು ಮತ್ತು ಪ್ರಚೋದಿಸುವುದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಹೇಳಿದರು.

ವಚನ ಕ್ರಾಂತಿ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಬಯಸಿದ ಬಸವಣ್ಣನವರ ನಂತರದ ಮಾನವತಾವಾದಿ ಎಂದರೆ ಸ್ವಾಮಿ ವಿವೇಕಾನಂದರು. ಆದರೆ ಅವರ ಆಶಯ ಈಡೇರಿಲ್ಲ.  ನ್ಯಾಯಾಲಯ ಹೊರತುಪಡಿಸಿ ಮಾನವ ಹಕ್ಕುಗಳ ಉಲ್ಲಂಘನೆ ಎಲ್ಲಿಯೇ ನಡೆದರೂ ಅದು ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದರು.

ಮಲೆಯಮ್ಮ ಮುದಟಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದೇವದಾಸಿ ವಿಮೋಚನಾ ಜಾಗೃತಿ ಸಮಿತಿ ಗೌರವ ಅಧ್ಯಕ್ಷ ಎಚ್‌.ಎಸ್‌.ಪಾಟೀಲ, ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಯೋಜನಾ ಸಲಹೆಗಾರ ಪ್ರೊ.ವೈ.ಜೆ.ರಾಜೇಂದ್ರ, ರಂಗ ಕಲಾವಿದೆ ಡಾ.ಕೆ.ನಾಗರತ್ಮಮ್ಮ, ಮಂಜಮ್ಮ ಜೂಗತಿ, ದಾನಪ್ಪ ಮಸ್ಕಿ, ಎಂ.ಆರ್‌.ಭೇರಿ, ಡಾ.ಆರ್‌.ವಿ.ಚಂದ್ರಶೇಖರ, ಎಂ.ಬಿ.ಕುಕನೂರು, ಜೆ.ಭಾರದ್ವಾಜ, ಪ್ರಮೋದ ತುರ್ವಿಹಾಳ, ಸುಲೋಚನಾ ಬನಸೋಡೆ, ಪಡಿಯಮ್ಮ ಮತ್ತಿತರರು ಇದ್ದರು. ಜಾಗೃತ ಸಮಿತಿ ಪ್ರಮುಖ ಅಲ್ಲಾಗಿರಿರಾಜ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.