ADVERTISEMENT

‘ನೀರಾವರಿಗೆ ಹಣ ನೀಡದ ಸರ್ಕಾರ’

ಬಿ ಸ್ಕೀಂ ನೀರಾವರಿ ಯೋಜನೆ ಕಾಮಗಾರಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:10 IST
Last Updated 25 ಮೇ 2017, 7:10 IST

ಹನುಮಸಾಗರ: ‘ರೈತಪರ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರ ಕೃಷ್ಣ ಭಾಗ್ಯ ಜಲನಿಗಮದ ನೀರಾವರಿ ಯೋಜನೆಗೆ 4 ವರ್ಷಗಳ ಅವಧಿಯಲ್ಲಿ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ’ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದರು.

ಸಮೀಪದ ಬಲಕುಂದಿ ಬಳಿಯ ಜಾಕ್ವೆಲ್‌ಗೆ ಮಂಗಳವಾರ ಭೇಟಿ ನೀಡಿದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿ, ‘ಕಾಮಗಾರಿಗಳು ಹೇಗೆ ನಡೆದಿವೆ ಎಂಬ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಉದ್ದೇಶದಿಂದ ಸಿಂಗಟಾಲೂರ ಏತ ನೀರಾವರಿ, ಮರೋಳ, ರಾಮತಾಳ ಏತ ನೀರಾವರಿ ಯೋಜನೆ ಕಾಮಗಾರಿಗಳ ವೀಕ್ಷಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕೃಷ್ಣ ಭಾಗ್ಯ ಜಲನಿಗಮದ ಬಿ ಸ್ಕೀಂ ನೀರಾವರಿ ಯೋಜನೆಯ ಮೊದಲನೆ ಹಂತದಲ್ಲಿ 12.815 ಟಿಎಂಸಿ ನೀರಿನಿಂದ ಹುನಗುಂದ ಮತ್ತು ಬಾದಾಮಿ ತಾಲ್ಲೂಕುಗಳ 2.85 ಲಕ್ಷ ಎಕರೆ ಹನಿ ನೀರಾವರಿ ವ್ಯಾಪ್ತಿಗೆ ಒಳಪಡುತ್ತವೆ. 2ನೇ ಹಂತದ ಯೋಜನೆಯಲ್ಲಿ ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕನಕಗಿರಿ ತಾಲ್ಲೂಕುಗಳ ಒಟ್ಟು 28631 ಹೆಕ್ಟರ್ ಜಮೀನಿಗೆ ನೀರಾವರಿಯಾಗುತ್ತದೆ’ ಎಂದು ಹೇಳಿದರು.

‘ಈ ಏತ ನೀರಾವರಿ ಯೋಜನೆಗೆ ಒಟ್ಟು ₹6397.85 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಈ ಯೋಜನೆಯಲ್ಲಿ 1.12  ಲಕ್ಷ ಹೆಕ್ಟರ್ ನೀರಾವರಿಯಾಗಲಿದೆ. ಬಿಜೆಪಿ ಸರ್ಕಾರವಿದ್ದಾಗ ಮೊದಲನೆ ಹಂತದ ಕಾಮಗಾರಿಗೆ ₹1000 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನಂತರ ಬಂದ ಕಾಂಗ್ರೆಸ್ ಸರ್ಕಾರ ₹1827.85 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ನಾಲ್ಕು ವರ್ಷಗಳಾದರೂ ಹಣ ಬಿಡುಗಡೆ ಮಾಡಿಲ್ಲ.

ವಿದ್ಯುತ್‌ ಉತ್ಪಾದನೆಗೆ ₹46 ಕೋಟಿ ಅವಶ್ಯಕ. ಈ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ನಿಯೋಗ ಹೋಗುತ್ತೇವೆ’ ಎಂದು ಅವರು ಹೇಳಿದರು.

‘ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು  ಮಟ್ಟದಲ್ಲಿ ಮೇ 25, 26ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಮಾಜಿ ಶಾಸಕ ಕೆ.ಶರಣಪ್ಪ, ಮುಖಂಡರಾದ ವಿಠಲ್‌ಶ್ರೇಷ್ಠಿ ನಾಗೂರ, ಬಸವರಾಜ ಹಳ್ಳೂರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ತಮ್ಮಣ್ಣಾಚಾರ ದಿಗ್ಗಾವಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಣ್ಣ ಚೌಡ್ಕಿ, ಕೊಪ್ಪಳ ಏತ ನೀರಾವರಿ ಹೋರಾಟ ಸಮಿತಿಯ ಮಲ್ಲಿಕಾರ್ಜುನ ಮೇಟಿ, ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯಸ್ಥ ಮಹಾಂತೇಶ ಕನ್ನೂರ, ಎಂಜಿನಿಯರ್ ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.