ADVERTISEMENT

‘ನೊಂದವರಿಗೆ ನೆರವಾಗುವುದೇ ಬದುಕಿನ ಸಾರ್ಥಕತೆ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:05 IST
Last Updated 23 ಏಪ್ರಿಲ್ 2017, 9:05 IST

ಕೊಪ್ಪಳ: ಅಂಗವಿಕಲರು, ನೊಂದವರಿಗೆ ನೆರವಾಗಿ ಅವರ ಸಂತೋಷವನ್ನು ನೋಡುವುದೇ ಬದುಕಿನ ಸಾರ್ಥಕ ಕ್ಷಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಜೈಪುರದ ಭಗವಾನ್‌ ಮಹಾವೀರ ವಿಕಲಾಂಗ ಸಹಾಯ  ಸಮಿತಿ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಯಚೂರಿನ ರಾಜಮಲ್‌ ಖೇಮ್‌ರಾಜ್‌ ಭಂಡಾರಿ ಫೌಂಡೇಷನ್‌ ಆಶ್ರಯದಲ್ಲಿ ಶನಿವಾರ ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ಅಂಗವಿಕಲರಿಗೆ ಉಚಿತ ಕಾಲು ಜೋಡಣೆ, ಗಾಲಿ ಕುರ್ಚಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಗರದ ಜೈನ ಸಮಾಜದವರು, ಮೆಹತಾ ಕುಟುಂಬದವರು ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಸಹೃದಯಿಗಳ ಮಾರ್ಗದರ್ಶನ ಬೇಕು. ಸತ್ಕಾರ್ಯಗಳ ಮೂಲಕ ಒಳ್ಳೆಯ ಬದುಕು ಸಾಗಿಸಬೇಕು. ಅಂಥ ಸಂತೃಪ್ತಿ ನಮ್ಮದಾಗಬೇಕು. ಆರ್‌.ಕೆ. ಭಂಡಾರಿ ಸಹೋದರರು ತಮ್ಮ ತಾಯಿಯ ಆಸೆ ನೆರವೇರಿಸಲು ಬಡಜನರಿಗೆ ನೆರವಾಗುವ ಉದ್ದೇಶದಿಂದ ಆಸ್ಪತ್ರೆ ತೆರೆದಿದ್ದಾರೆ. ಸಮಾಜಮುಖಿ ಕಾರ್ಯಗಳು ಜನಮಾನಸದಲ್ಲಿ ಉಳಿಯುತ್ತವೆ. ಇದು ನಿರಂತರವಾಗಿರಲಿ’ ಎಂದು ಆಶಿಸಿದರು.

ಕುಸುಮಾಬಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 100 ಅಂಗವಿಕಲರಿಗೆ ಕೃತಕ ಕಾಲು, ಗಾಲಿ ಕುರ್ಚಿ, ನಡಿಗೆ ಸಾಧನಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ್‌, ಆರ್‌.ಕೆ.ಬಿ. ಫೌಂಡೇಷನ್‌ ಟ್ರಸ್ಟಿ ವಿಜಯರಾಜ್‌ ಭಂಡಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್‌ ಜುಲ್ಲು ಖಾದ್ರಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ್‌, ಕಿಮ್ಸ್‌ ನಿರ್ದೇಶಕ ಡಾ.ಶಂಕರ್‌ ಮಲಾಪುರೆ, ಮುಖಂಡರಾದ ಅಭಯಕುಮಾರ್‌ ಮೆಹತಾ,  ರಾಮಲಾಲ್‌ ಬಾಗ್ರೇಚಾ, ಫೇಸುಲಾಲ್‌, ಸುರೇಶ್‌ಗೌಡ ಪಾಟೀಲ, ಸುರೇಶ್‌ ಭೂಮರಡ್ಡಿ, ಅಶೋಕಚಂದ್‌ ಭಾಗಮಾರ, ಸೌಭಾಗ್ಯರಾಜ ಭಂಡಾರಿ, ಅಜಯಕುಮಾರ ಭಂಡಾರಿ, ಎಂ.ಕೆ.ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೊಹಮ್ಮದ್‌ ರಿಯಾಜುದ್ದೀನ್‌ ಇದ್ದರು. ಪದಂ ಮೆಹತಾ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.