ADVERTISEMENT

ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:41 IST
Last Updated 27 ಮೇ 2017, 7:41 IST
ಕುಷ್ಟಗಿಯ ಟಿಎಪಿಸಿಎಂಎಸ್‌ ನ್ಯಾಯಬೆಲೆ ಅಂಗಡಿ ಮುಂದೆ ಬಯೊಮೆಟ್ರಿಕ್‌ ನೀಡಲು ಶುಕ್ರವಾರ ಪಡಿತರದಾರರು ನೆರೆದಿದ್ದರು
ಕುಷ್ಟಗಿಯ ಟಿಎಪಿಸಿಎಂಎಸ್‌ ನ್ಯಾಯಬೆಲೆ ಅಂಗಡಿ ಮುಂದೆ ಬಯೊಮೆಟ್ರಿಕ್‌ ನೀಡಲು ಶುಕ್ರವಾರ ಪಡಿತರದಾರರು ನೆರೆದಿದ್ದರು   

ಕುಷ್ಟಗಿ: ‘ಬಯೊಮೆಟ್ರಿಕ್‌ ನೀಡಲು ನ್ಯಾಯಬೆಲೆ ಅಂಗಡಿಯವರು ಪಡಿತರದಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಪಡಿತರದಾರರು ಆರೋಪಿಸಿದ್ದಾರೆ.

ಈ ತಿಂಗಳಿನಿಂದ ಕೂಪನ್‌ ವ್ಯವಸ್ಥೆ ರದ್ದುಪಡಿಸಲಾಗಿದೆ. 25 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೊಮೆಟ್ರಿಕ್‌ ನೀಡಿದ ನಂತರ ಪಡಿತರಧಾನ್ಯ ಪಡೆಯುವ ಹೊಸ ವ್ಯವಸ್ಥೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾರಿಗೆ ತಂದಿದೆ. ಪಡಿತರದಾರರು ಬಯೊಮೆಟ್ರಿಕ್‌ ನೀಡಲು ಶುಲ್ಕ ನೀಡುವಂತಿಲ್ಲ.

‘ಪಟ್ಟಣದ 8, ತಾವರಗೇರಾದ 3 ಅಂಗಡಿಗಳ ಮಾಲೀಕರು  ತಲಾ ₹10 ರಿಂದ 20ರಂತೆ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದೆ ಇದ್ದರೆ ತಾಂತ್ರಿಕ ನೆಪ ಹೇಳಿ ವಾಪಸ್‌ ಕಳುಹಿಸುತ್ತಾರೆ’ ಎಂದು ಪಡಿತರದಾರರು ದೂರಿದರು.

ADVERTISEMENT

‘ಪಟ್ಟಣದ ಟಿಎಪಿಸಿಎಂಎಸ್‌ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪಡಿತರದಾರರು ಇದ್ದಾರೆ. ಪ್ರತಿಯೊಬ್ಬರಿಂದ ₹20ರಂತೆ ಹಣ ವಸೂಲಿ ಮಾಡಿ ಚೀಟಿ ನೀಡುತ್ತಿದ್ದಾರೆ’ ಎಂದು ಪಡಿತರದಾರರಾದ ತಿಪ್ಪಮ್ಮ ಕಂಚಿ, ಯಲ್ಲಮ್ಮ, ಪ್ರವೀಣ್ ಹುಸೇನ್‌ಬಿ ಆರೋಪಿಸಿದರು.

‘ಹಣ ಕೊಡದಿದ್ದರೆ ಪಡಿತರ ಇಲ್ಲ ಎಂದು ನ್ಯಾಯಬೆಲೆ ಅಂಗಡಿಯವರು ಹೇಳುತ್ತಿದ್ದಾರೆ. ಶಾಸಕರ ಕೃಪೆ ಇರುವುದರಿಂದ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಬೆದರಿಸುತ್ತಿದ್ದಾರೆ’ ಎಂದು ಹನುಮಂತಪ್ಪ, ಸಂಗಮೇಶ್‌ ಆರೋಪಿಸಿದರು.

‘ಹಣ ಕೊಡುವಂತೆ ಒತ್ತಡ ಹೇರಿಲ್ಲ, ಯಾರಿಂದಲೂ ಹಣ ಸ್ವೀಕರಿಸಿಲ್ಲ’ ಎಂದು  ಟಿಎಪಿಸಿಎಂಎಸ್‌ ಸಿಬ್ಬಂದಿ ಹೇಳಿದರು. ಈ ಕುರಿತು ಆಹಾರ ಇಲಾಖೆ ಉಪ ನಿರ್ದೇಶಕಿ ಗೀತಾ, ತಹಶೀಲ್ದಾರ್‌ ಎಂ.ಗಂಗಪ್ಪ ಮತ್ತು ಆಹಾರ ಇಲಾಖೆ ನಿರೀಕ್ಷಕ ರಾಜು ಪಿರಂಗಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.

‘ಮೇ ತಿಂಗಳ ಪಡಿತರ ಇನ್ನೂ ವಿತರಣೆಯಾಗಿಲ್ಲ. ಬಯೊಮೆಟ್ರಿಕ್‌ ನೀಡಲು ಸುಡು ಬಿಸಿಲಿನಲ್ಲೂ ಸಾಲುಗಟ್ಟಿ ನಿಲ್ಲುವಂತಾಗಿದೆ’ ಎಂದು ಪಡಿತರದಾರರಾದ ಯಲ್ಲಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.