ADVERTISEMENT

ಪಡಿತರ ಧಾನ್ಯ ಇಲಿ, ಹೆಗ್ಗಣ ಪಾಲು

ಹುಳು ಹಿಡಿದ 1,300 ಚೀಲ ಅಕ್ಕಿ, ಗೋಧಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 11:19 IST
Last Updated 29 ಜನವರಿ 2015, 11:19 IST

ಕೊಪ್ಪಳ:  ಪಡಿತರ ಧಾನ್ಯ ಇಲಿ, ಹೆಗ್ಗಣ ಪಾಲಾಗಿರುವ ಘಟನೆ ನಗರದ ಗಂಜ್‌ ವೃತ್ತದ ಬಳಿಯ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮಿನಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಸುಮಾರು 1,300 ಚೀಲ ಅಕ್ಕಿ ಮತ್ತು ಗೋಧಿ ಇಲಿ, ಹೆಗ್ಗಣ ಮತ್ತು ಹುಳುಗಳ ಪಾಲಾಗಿದೆ. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ಧಾನ್ಯ ಸಂಗ್ರಹಿಸಲಾಗಿದೆ. ಅತ್ತ ಸಮರ್ಪಕ ವಿತರಣೆಯೂ ನಡೆದಿಲ್ಲ. ಇತ್ತ ಸುರಕ್ಷಿತವಾಗಿ ಇಡಲೂ ಆಗಿಲ್ಲ. ಧಾನ್ಯಗಳು ಉಪಯೋಗಿಸಲಾರದಷ್ಟು ಕೆಟ್ಟುಹೋಗಿವೆ. ಕೆಲವು ಚೀಲಗಳಲ್ಲಿ ಅಕ್ಕಿ, ಗೋಧಿ ಬೆರೆತಿವೆ. ಇಂಥ ಅಕ್ಕಿಯನ್ನು ಬೇರೆ ಮಾರ್ಗದ ಮೂಲಕ ಮಾರಾಟ ಮಾಡುವ ಯತ್ನಗಳೂ ನಡೆದಿವೆ ಎಂದು ಗೋದಾಮು ಸಮೀಪದ ಕಾರ್ಮಿಕರು ಮಾಹಿತಿ ನೀಡಿದರು.

ಕಾರಣ: ಭಾರತ ಆಹಾರ ನಿಗಮದಿಂದ ಧಾನ್ಯ ಎತ್ತುವಳಿ ಮಾಡಿ ಇಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನೀಡಲಾ­ಗುತ್ತದೆ. ನಿಗಮವು ನಗರದ ಟಿಎಪಿಎಂಸಿ ಗೋದಾಮಿನಲ್ಲಿ ಧಾನ್ಯ ಸಂಗ್ರಹಿಸಿದೆ. ಭಾರತ ಆಹಾರ ನಿಗಮದಿಂದ ಎತ್ತುವಳಿಯಾಗುವ ಸಂದರ್ಭ ಸೀಲ್‌ ಮಾಡಲಾದ ಪ್ಯಾಕ್‌ ಒಡೆದು ಹೋದರೆ ಅದನ್ನು ಕೈಯಿಂದಲೇ ತುಂಬಿ ಹೊಲಿಗೆ ಹಾಕಿ ಕಳುಹಿಸುತ್ತಾರೆ.

ಈ ಸಂದರ್ಭ ಕಸಕಡ್ಡಿ ಸೇರುವ, ಕೆಲವು ಚೀಲಗಳಲ್ಲಿ ಅಕ್ಕಿ ಮತ್ತು ಗೋಧಿ ಮಿಶ್ರಣವಾಗಿರುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಎಚ್‌.ಲಂಬೂ ಹೇಳಿದರು. ತಾನು ಈಚೆಗಷ್ಟೇ ಬಂದಿದ್ದೇನೆ. ಸುಮಾರು ಎರಡು ವರ್ಷಗಳಿಂದಲೂ ಇಲ್ಲಿ ಸಂಗ್ರಹಿಸಿರುವ ಸಾಧ್ಯತೆಯಿದೆ.

ಅಲ್ಲದೇ ಜ. 6ರಂದು ಈ ಧಾನ್ಯಗಳನ್ನು ಸ್ವಚ್ಛ ಮಾಡುವಂತೆ ಗೋದಾಮು ವ್ಯವಸ್ಥಾಪಕರಿಗೆ ಸೂಚಿಸಿದ್ದೆ. ಗೋದಾಮು ಕೂಡಾ ಧಾನ್ಯ ಸಂಗ್ರಹಕ್ಕೆ ಸೂಕ್ತವಾಗಿಲ್ಲ. ಎಲ್ಲ ಅಂಶಗಳನ್ನೂ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಧಾನ್ಯ­ವನ್ನು ಅಲ್ಲಿಂದ ತೆರವು ಮಾಡಿ ಸ್ವಚ್ಛ­ಗೊಳಿಸಲು ಕ್ರಮವಹಿಸ­ಲಾಗುವುದು ಎಂದು ಲಂಬೂ ಹೇಳಿದರು. ಬೇರೆ ರೀತಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದಿರುವ ಆರೋಪ ನಿಜವಲ್ಲ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.