ADVERTISEMENT

ಪರಾರಿ ಆರೋಪಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 10:27 IST
Last Updated 13 ಫೆಬ್ರುವರಿ 2017, 10:27 IST
ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ವಿರುಪಾಕ್ಷಪ್ಪ ಅಕ್ಕಿ
ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ವಿರುಪಾಕ್ಷಪ್ಪ ಅಕ್ಕಿ   

ಕೊಪ್ಪಳ : ನಗರದ ಜಿಲ್ಲಾ ಕಾರಾಗೃಹದಿಂದ ಶನಿವಾರ ಪರಾರಿಯಾಗಿದ್ದ ಆರೋಪಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿ, ಈಗ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಯಲಬುರ್ಗಾ ತಾಲ್ಲೂಕಿನ ತಿಪ್ಪನಾಳ ಗ್ರಾಮದ ವಿರುಪಾಕ್ಷಪ್ಪ ಅಕ್ಕಿ(24) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಅತ್ಯಾಚಾರಕ್ಕೆ ಯತ್ನಿಸಿ, ಬೇವೂರು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಜ.23 ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಜೈಲು ಸೇರಿದ್ದ ಈತ ಶನಿವಾರ ಜೈಲಿನಿಂದ ಪರಾರಿಯಾಗಿದ್ದ. ತಿಪ್ಪನಾಳ ಗ್ರಾಮದವರೆಗೆ ಹೋಗಿ, ತನ್ನ ತೋಟದಲ್ಲಿ ಅವಿತುಕೊಂಡಿದ್ದ.  ಭಾನುವಾರ ಖಚಿತ ಮಾಹಿತಿಯೊಂದಿಗೆ ಆರೋಪಿಯನ್ನು ಬಂಧಿಸಲು ಪೊಲೀಸರು ಹೋಗುತ್ತಿದ್ದಂತೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸ್‌ ಸಿಬ್ಬಂದಿ  ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಂದಿಖಾನೆ ಇಲಾಖೆ ಡಿಐಜಿ ಟಿ.ಪಿ.ಶೇಷಾದ್ರಿ ಶನಿವಾರ ರಾತ್ರಿ ಕೊಪ್ಪಳದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು  ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಾಸಕ ತಂಗಡಗಿಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಕಾರಟಗಿ : ಕನಕಗಿರಿ ಕ್ಷೇತ್ರದ  ಶಾಸಕ ಶಿವರಾಜ್ ಎಸ್. ತಂಗಡಗಿ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಕಾರಟಗಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

‘ಐದಕ್ಕೂ ಹೆಚ್ಚು ದೂರವಾಣಿ ಸಂಖ್ಯೆಗಳಿಂದ 18ಕ್ಕೂ ಅಧಿಕ ಬಾರಿ ‘ಅಪರಿಚಿತ ವ್ಯಕ್ತಿ’ಗಳು ಶಾಸಕ ತಂಗಡಗಿ ಅವರಿಗೆ ಕರೆಮಾಡಿ ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿದರೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಶಾಸಕ ತಂಗಡಗಿ ಅವರು, ತಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಗೃಹ ಸಚಿವರನ್ನು ಕೋರಿದ್ದರು. ಗೃಹ ಸಚಿವರ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಾಸಕರಿಗೆ ಬೆಂಗಾವಲು ಪಡೆಯ ಭದ್ರತೆ ನೀಡಲಾಗಿದೆ’ ಎಂದು ಸಬ್‌ಇನ್‌ಸ್ಪೆಕ್ಟರ್‌ ನಿಂಗಪ್ಪ ಎನ್. ಆರ್. ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.