ADVERTISEMENT

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಅಧ್ಯಕ್ಷರ 10 ತಿಂಗಳ ಅವಧಿ ಇಂದು ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 9:26 IST
Last Updated 14 ಜನವರಿ 2017, 9:26 IST
ಕುಷ್ಟಗಿ: ಬಿಜೆಪಿ ಅಧಿಕಾರದಲ್ಲಿರುವ ಇಲ್ಲಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬದಲಾವಣೆ ಸಂಬಂಧ ಚಟುವಟಿಕೆಗಳು ಗರಿಗೆದರಿದ್ದು, ಅಧಿಕಾರದ ಗದ್ದುಗೆ ಏರುವ ನಿಟ್ಟಿನಲ್ಲಿ ಪಕ್ಷದಲ್ಲಿನ ಕೆಲ ಆಕಾಂಕ್ಷಿಗಳು ತೆರೆ ಮರೆಯಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ.
 
ಹಾಲಿ ಅಧ್ಯಕ್ಷ ಕಲ್ಲೇಶ ತಾಳದ ಮತ್ತು ಉಪಾಧ್ಯಕ್ಷೆಯಾಗಿ ಜ್ಯೋತಿ ಸೇಬಿನಕಟ್ಟಿ ಅಧಿಕಾರ ವಹಿಸಿಕೊಂಡು ಜ.14ಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿದೆ. ಉಳಿದ ಇಪ್ಪತ್ತು ತಿಂಗಳ ಅಧಿಕಾರವನ್ನು ಇಬ್ಬರಿಗೆ ತಲಾ ಹತ್ತು ತಿಂಗಳ ಅವಧಿಯಂತೆ ಹಂಚಿಕೆ ಮಾಡಲು ಬಿಜೆಪಿ ತಾಲ್ಲೂಕಿನ ಹೈಕಮಾಂಡ್‌ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 
 
ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ನಾಗರಾಜ ಮೇಲಿನಮನಿ ಮತ್ತು ರಾಚಪ್ಪ ಮಾಟಲದಿನ್ನಿ ಆಕಾಂಕ್ಷಿಗಳಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹೊನ್ನಪ್ಪ ಭೋವಿ ಮತ್ತು ಜೆಡಿಎಸ್‌ನಿಂದ ಬಿಜೆಪಿ ಪಾಳೆಯದಲ್ಲಿರುವ ಪವನಕುಮಾರ ಸೂಡಿ ಆಕಾಂಕ್ಷಿಗಳಾಗಿದ್ದಾರೆ. 
 
ಕಲ್ಲೇಶ ಅಧ್ಯಕ್ಷರಾಗುವ ಸಂದರ್ಭದಲ್ಲಿ ಪೈಪೋಟಿ ತೀವ್ರಗೊಂಡು ಪಕ್ಷ ಇಕ್ಕಟ್ಟಿನ ಸ್ಥಿತಿ ತಲುಪಿತ್ತು. 
 
‘ತೀವ್ರ ಕಸರತ್ತು ನಡೆಸಿದ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಮಾಜಿ ಶಾಸಕ ಕೆ.ಶರಣಪ್ಪ ಎರಡೂ ಸ್ಥಾನಗಳಿಗೆ ತಲಾ ಹತ್ತು ತಿಂಗಳ ಅಧಿಕಾರ ಹಂಚಿಕೆ ಸೂತ್ರ ಹೆಣೆದು, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅವಕಾಶ ಕಲ್ಪಿಸುವ ಭರವಸೆ ನೀಡುವ ಮೂಲಕ ಆಗ ಪೈಪೋಟಿಯಲ್ಲಿದ್ದ ನಾಗರಾಜ ಮೇಲಿನಮನಿ, ರಾಚಪ್ಪ ಮಾಟಲದಿನ್ನಿ ಅವರನ್ನು ಸಮಾಧಾನಪಡಿಸಿ ಬೀಸೊದೊಣ್ಣೆಯಿಂದ ಪಾರಾಗಿದ್ದರು. ಈಗ ಅದೇ ಬದ್ಧತೆಯನ್ನು ಹೈಕಮಾಂಡ್‌ ಉಳಿಸಿಕೊಳ್ಳುತ್ತದೆಯೆ ಎಂಬ ಪ್ರಶ್ನೆ ಬಿಜೆಪಿ ಸದಸ್ಯರನ್ನು ಕಾಡುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸದಸ್ಯರು ಹೇಳಿದರು. 
 
ಈ ಮಧ್ಯೆ ಹಾಲಿ ಅಧ್ಯಕ್ಷ ಕಲ್ಲೇಶ ಮತ್ತು ಉಪಾಧ್ಯಕ್ಷೆಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ  ಈ ವಿಷಯ ಕುರಿತು ವಿವರಿಸಿದ ಶಾಸಕ ದೊಡ್ಡನಗೌಡ ಪಾಟೀಲ, ‘ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ಅಧಿಕಾರದ ಸ್ಥಾನಮಾನದ ಬಗ್ಗೆ ಪ್ರಿಯೊಬ್ಬರೂ ಆಕಾಂಕ್ಷಿಗಳಾಗಿ ಇರುವುದು ಸಹಜ ಪ್ರಕ್ರಿಯೆ’ ಎಂದರು.
 
ತಮಗೆ ಅಧಿಕಾರ ತ್ಯಜಿಸುವಂತೆ ಯಾರೂ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಅಧ್ಯಕ್ಷ ಕಲ್ಲೇಶ್, ಅಧಿಕಾರ ಬದಲಾವಣೆಗೆ ಸಂಬಂಧಿಸಿದ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ರಾಜೀನಾಮೆ ನೀಡಿ ಅಥವಾ ಮುಂದುವರಿಯಲು ಹೇಳಿದರೆ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. 
 
ನಾಗರಾಜ ಮೇಲಿನಮನಿ ಮಾತನಾಡಿ, ತಮ್ಮ ಕುಟುಂಬ ಎರಡು ದಶಕಗಳಿಂದಲೂ ಶಾಸಕ ದೊಡ್ಡನಗೌಡ ಪಾಟೀಲ ಅವರೊಂದಿಗೆ ವಿಶ್ವಾಸ ಹೊಂದಿದೆ. ಸೇವಾ ಹಿರಿತನ ದಿಂದಈ ಬಾರಿ ಪಕ್ಷ ತಮಗೆ ಅವಕಾಶ ಕೊಡುವ ನಿರೀಕ್ಷೆ ಇದೆ ಎಂದರು. ಇದೇ ಮಾತನ್ನು ಇನ್ನೊಬ್ಬ ಆಕಾಂಕ್ಷಿ ರಾಚಪ್ಪ ಕೂಡ ಹೇಳಿದರು. 
 
ಕಾಂಗ್ರೆಸ್‌ ನಡೆ: ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸುತ್ತಿರುವ ಕಾಂಗ್ರೆಸ್‌ ಬಿಜೆಪಿ, ಜೆಡಿಎಸ್‌ ಅತೃಪ್ತ ಸದಸ್ಯರನ್ನು ಸೆಳೆದು ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.