ADVERTISEMENT

ಪ್ರಜಾಪ್ರಭುತ್ವದ ಆಧಾರ ಸಂವಿಧಾನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 11:23 IST
Last Updated 27 ನವೆಂಬರ್ 2015, 11:23 IST

ಯಲಬುರ್ಗಾ: ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರ ಸಂವಿಧಾನ ರಚಿಸಿದ ದಾರ್ಶನಿಕರು ನಿತ್ಯ ಸ್ಮರಣೀಯರು ಎಂದು ಕಿರಿಯ ಶ್ರೇಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಹೇಳಿದರು.

ತಾಲ್ಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನ ನಡೆ, ನುಡಿ ಹಾಗೂ ಕಾರ್ಯಚಟುವಟಿಕೆಯಲ್ಲಿ ಸಂವಿಧಾನದ ಅಂಶಗಳು ಒಳಗೊಂಡಿರುತ್ತವೆ ಎಂದರು.

ಕಾನೂನು ಹಾಗೂ ನಿಯಮಾನುಸಾರವಾಗಿ ಜೀವನ ನಡೆಸುವುದರ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕಾಗಿದೆ. ಪರಸ್ಪರ ಸಹಬಾಳ್ವೆಗೆ ಬದ್ಧರಾಗಿ ಕುಟುಂಬ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ. ಅತ್ಯಾಚಾರ, ಬಾಲ್ಯವಿವಾಹ, ಬಾಲ ಕಾರ್ಮಿಕ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ನುಡಿದರು.

ವಕೀಲರ ಸಂಘದ ಅಧ್ಯಕ್ಷ ಎಸ್‌.ಎನ್. ಶ್ಯಾಗೋಟಿ ಮಾತನಾಡಿ, ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ. ಅಂಬೇಡ್ಕರ್‌ ಅವರ ಕೊಡುಗೆಯ ಪ್ರತಿಫಲ ನೆಮ್ಮದಿಯ ಜೀವನ ನಡೆಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಪ್ರಗತಿ ನಿಧಾನಗತಿಯಲ್ಲಿದ್ದು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಾಧನೆ ಮಾಡಬೇಕಾಗಿದೆ ಎಂದು ಹೇಳಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಎನ್‌.ಎಸ್‌.ನಾಯಕ, ಸರ್ಕಾರಿ ವಕೀಲ ಬಿ.ಎಂ.ಶಿರೂರ ಮಾತನಾಡಿದರು. ವಕೀಲರಾದ ಮಲ್ಲನಗೌಡ  ಪಾಟೀಲ, ಎಂ.ಎಸ್‌.ನಾಯ್ಕರ್‌ ಉಪನ್ಯಾಸ ನೀಡಿದರು. ಪ್ರಾಚಾರ್ಯ ವಿ.ಬಿ. ಹನುಮನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರಾದ ಎಚ್‌.ಎಸ್‌. ಹಿರೇಮನಿ, ಜಿ.ವಿ. ಹಿರೇಗೌಡ್ರ, ಮೇಲ್ವಿಚಾರಕ ಗುರುನಾಥ ಹೂಗಾರ ಇದ್ದರು.

ಕಾನೂನು ಸೇವಾ ಸಮಿತಿಯ ಸಹಾಯಕ ರಾಘವೇಂದ್ರ ಕೋಳಿಹಾಳ ಸ್ವಾಗತಿಸಿದರು. ಪುರುಷೋತ್ತಮ ಪೂಜಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.