ADVERTISEMENT

ಬಾಲಕಾರ್ಮಿಕ ಕಾಯ್ದೆ ತಿದ್ದುಪಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಮೇ 2015, 7:30 IST
Last Updated 28 ಮೇ 2015, 7:30 IST

ಕೊಪ್ಪಳ: ಬಾಲ ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ವಿರೋಧಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರ ಘಟಕದ ಅಧ್ಯಕ್ಷ ಮಹಮದ್‌ ಕಲಿಮುಲ್ಲಾ ಖಾನ್‌ ಮಾತನಾಡಿ, ಮುಕ್ತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಹಾಗೂ ನೌಕರಿ ನಿಷೇಧದ ವಯೋಮಿತಿಯು ಒಂದಕ್ಕೊಂದು ಪೂರಕ. ಬಾಲ ಕಾರ್ಮಿಕ ಕಾಯ್ದೆಯನ್ನು ತಿದ್ದುಪಡಿ ಮಾಡುವುದರಿಂದ ಶೈಕ್ಷಣಿಕ ವ್ಯವಸ್ಥೆಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ ಈ ಕಾಯ್ದೆಯು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಕ್ಕೂಟ, ರಾಷ್ಟ್ರೀಯ ಮಕ್ಕಳ ಕಾರ್ಯನೀತಿ, ಅಂತರಾಷ್ಟ್ರೀಯ ಕಾರ್ಮಿಕ ಒಕ್ಕೂಟಗಳ ನಿಯಮಗಳಿಗೆ ವಿರುದ್ಧವಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಅಲ್ಲದ ಕ್ಷೇತ್ರಗಳಲ್ಲಿ ಶಾಲೆಯ ರಜಾ ದಿನದಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿದೆ.

ಇದು ಉದ್ಯೋಗ ನೀಡುವವರಿಗೆ ಮಕ್ಕಳನ್ನು ಶೋಷಿಸಲು ಹಾಗೂ ಶಿಕ್ಷೆಯಿಂದ ಪಾರಾಗಲು ಸರ್ಕಾರವು ಕಾನೂನು ಬದ್ಧವಾದ ದಾರಿ ಮಾಡಿಕೊಡುತ್ತಿದೆ. ಬಾಲಕಾರ್ಮಿಕತೆ ಮೊದಲು ಶಾಲಾ ರಜಾ ದಿನಗಳಿಂದಲೇ ಪ್ರಾರಂಭವಾಗುತ್ತದೆ. ನಂತರ ಶಿಕ್ಷಣವನ್ನೇ ಸಂಪೂರ್ಣ ಮೊಟಕುಗೊಳಿಸುತ್ತದೆ.

ಅದಕ್ಕಾಗಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು ಶಾಸನ ಬದ್ಧವಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಿಯಾಜ್ ಅಹ್ಮದಖಾನ, ಟಿಪ್ಪುಸುಲ್ತಾನ್, ಜಕ್ರೀಯಾಖಾನ, ಹುಸೇನ್, ಇಸಾಖ್ ಫುಜ್ಜಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT