ADVERTISEMENT

‘ಭಾಷೆ ಬೆಳವಣಿಗೆಗೆ ಎಲ್ಲರ ಕೊಡುಗೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 11:10 IST
Last Updated 16 ಜುಲೈ 2017, 11:10 IST

ಹನುಮಸಾಗರ: ಸುಮಾರು 2,500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಉಪನ್ಯಾಸಕ ಸಂಗಮೇಶ ಬ್ಯಾಳಿ ಹೇಳಿದರು. ಶುಕ್ರವಾರ ಇಲ್ಲಿನ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 2016-–17ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ  ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

‘ಬದುಕಿಗಾಗಿ ಬೇರೆ ಭಾಷೆಗಳನ್ನು ಅವಲಂಬಿಸಬೇಕೇ ಹೊರತು ಬೇರೆ ಭಾಷೆಗಳನ್ನೇ ಬದುಕನ್ನಾಗಿ ಮಾಡಿಕೊಳ್ಳಬಾರದು. ಇಂದಿನ ದಿನಗಳಲ್ಲಿ ಕನ್ನಡ ಶಿಕ್ಷಕರು ಸೇರಿದಂತೆ ಎಲ್ಲ ಪಾಲಕರೂ ತಮ್ಮ ಮಕ್ಕಳು ಇಂಗ್ಲಿಷ್‌ ಭಾಷೆಯಲ್ಲಿ ಕಲಿಯಬೇಕೆಂಬ ವ್ಯಾಮೋಹಕ್ಕೆ ಸಿಲುಕಿರುವುದು ಕನ್ನಡ ಭಾಷೆಯ ವಿನಾಶಕ್ಕೆ ಒಂದು ಕಾರಣವಾಗಿದೆ’ ಎಂದು ವಿಷಾದಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಚಂದಪ್ಪ ಹಕ್ಕಿ ಮಾತನಾಡಿ, ‘ಹೆತ್ತ ತಾಯಿಯನ್ನು ಗೌರವಿಸುವಂತೆ ನಮ್ಮ ಮಾತೃ ಭಾಷೆಯನ್ನು ಗೌರವಿಸಬೇಕು. ಕನ್ನಡ ಭಾಷೆ, ನೆಲ, ಜಲ ಪರಿಸ್ಥಿತಿಯ ಬಗ್ಗೆ ಚಿಂತನ ಮಂಥನದೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಲೆಂಕಪ್ಪ ವಾಲೀಕಾರ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿವಿಧ ಕನ್ನಡಪರ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದ್ದು ಸಲಹೆಗಳನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದರು.

ADVERTISEMENT

ರಾಜ್ಯ ಜಂಪ್‌ರೋಪ್‌ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್‌ಕರೀಮ ವಂಟೆಳಿ, ನಿಸರ್ಗ ಸಂಗೀತ ಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ,  ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಶಕೀಲಾ ಡಾಲಾಯತ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಿ ಕಟಗಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸರ್ವೋದಯ ಸಂಸ್ಥೆಯ ಅಧ್ಯಕ್ಷ ವಿಜಯೀಂದ್ರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಮಹಾಂತೇಶ ಚೌಡಾಪೂರ, ಶ್ರೀನಿವಾಸ ಜಹಗೀರದಾರ, ಮಲ್ಲಯ್ಯ ಕೋಮಾರಿ, ವಿಶ್ವನಾಥ ನಾಗೂರ, ಬಸವರಾಜ ಕನ್ನೂರ, ಪ್ರಹ್ಲಾದ ಮಠದ, ಮಂಜುನಾಥ ಗುಳೇದಗುಡ್ಡ, ಗೌರಮ್ಮ ಕೊಪ್ಪದ, ದ್ರಾಕ್ಷಾಯಿಣಿ ಕುರಟ್ಟಿ, ಗ್ಯಾನಪ್ಪ ತಳವಾರ ಇದ್ದರು. ಮಂಜುನಾಥ ಗುಳೇದಗುಡ್ಡ ಸ್ವಾಗತಿಸಿದರು. ಹುಸೇನ ಮುದಗಲ್ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಚೌಡಾಪೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.