ADVERTISEMENT

ಮತದಾನ ಬಹಿಷ್ಕಾರ: ಮನವೊಲಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:03 IST
Last Updated 12 ಜನವರಿ 2017, 11:03 IST

ಗಂಗಾವತಿ: ಕೆರೆ ತುಂಬಿಸುವ ಯೋಜನೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಎಪಿಎಂಸಿ ಚುನಾವಣೆ ಸೇರಿದಂತೆ ಎಲ್ಲ ಮಾದರಿಯ ಮತದಾನ ಬಹಿಷ್ಕರಿಸಿದ್ದ ವಿಠಲಾಪುರ ಗ್ರಾಮದ ರೈತರನ್ನು ಭೇಟಿಯಾದ ತಹಶೀಲ್ದಾರ್ ರೈತರ ಮನವೊಲಿಸುವಲ್ಲಿ ಸಫಲರಾದರು.   

ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಈಚೆಗೆ ಗ್ರಾಮದ ರೈತರ ಸಭೆ ನಡೆಸಿದ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್, ಯೋಜನೆ ಅಥವಾ ಅನುಷ್ಠಾನವಾಗಿರುವ ಕಾಮಗಾರಿಯಲ್ಲಿ ಗ್ರಾಮಕ್ಕೆ ಅನ್ಯಾಯವಾಗಿದ್ದರೆ ಕಾನೂನು ಬದ್ಧವಾಗಿ ಹೋರಾಟ ಮಾಡಲು ಅವಕಾಶವಿದೆ. ಆದರೆ ಸಂವಿಧಾನ ಬದ್ಧವಾಗಿರುವ ಹಕ್ಕುನ್ನು ಚಲಾಯಿಸದೇ ಇರುವುದು ಸರಿಯಲ್ಲ. ಈ ಬಗ್ಗೆ ಎಪಿಎಂಸಿಯ ಚುನಾವಣೆ ಬಳಿಕ ಮತ್ತೊಮ್ಮೆ ಗ್ರಾಮದಲ್ಲಿ ಸಭೆ ಕರೆದು ಚರ್ಚಿಸೋಣ. ಸಂಬಂಧಿತ ಇಲಾಖೆಯ ಅಧಿಕಾರಿಯನ್ನು ಸಭೆಗೆ ಕರೆಸೋಣ ಎಂದು ತಹಶೀಲ್ದಾರ್ ಹೇಳಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾರತೇಶ್ವರ ಕೆರೆ ಅಭಿವೃದ್ಧಿ ಸಮಿತಿ  ಪದಾಧಿಕಾರಿಗಳು, ಈ ಹಿಂದೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಸ್ವತಃ ಶಾಸಕ ಶಿವರಾಜ ತಂಗಡಗಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೀವು ಭರವಸೆ ನೀಡಿದ ಮಾತ್ರಕ್ಕೆ ರೈತರ ಆಶಯ ಕೈಗೂಡುತ್ತದೆ ಎಂಬ ನಿರೀಕ್ಷೆ ಇಲ್ಲ’ ಎಂದು ರೈತ ಗ್ರಾಮದ ಮುಖಂಡ ಗುಂಡಪ್ಪ ಬಡಗಿ, ಅಮರೇಶ ಮೆತಗಲ್ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣೆ ಬಳಿಕ ಖಚಿತವಾಗಿ ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ರೈತರು ಮತದಾನಕ್ಕೆ ಒಪ್ಪಿಕೊಂಡರು. ತಾಲ್ಲೂಕು ಪಂಚಾಯಿತಿ ಇಒ ವೆಂಕೋಬಪ್ಪ, ಗ್ರಾಮೀಣ ವೃತ್ತದ ಸಿಪಿಐ ದೀಪಕ್ ಬೂಸಾರೆಡ್ಡಿ, ಗ್ರಾಮದ ನಾಗರಾಜ ಹೊಸಗುಡ್ಡ, ದುರುಗಪ್ಪ ವಟಲಪರವಿ, ದೊಡ್ಡಬಸವ, ಚಿದಾನಂದ ಪತ್ತಾರ, ಗುಂಡಪ್ಪ ನಿಲೋಗಲ್, ದೊಡ್ಡ ವಿರುಪಾಕ್ಷಿ, ಪರಶುರಾಮಪ್ಪ, ವೀರೇಶ, ಸತ್ಯನಾರಾಯಣ, ರಾಮಣ್ಣ
ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.