ADVERTISEMENT

ರಸ್ತೆ ಒತ್ತುವರಿ: ವಾಣಿಜ್ಯ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:45 IST
Last Updated 24 ಮೇ 2017, 5:45 IST

ಗಂಗಾವತಿ: ಇಲ್ಲಿನ ಜಯನಗರದಿಂದ ಕೊಪ್ಪಳ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ನಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಾಣವಾಗುತ್ತಿದ್ದು, ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ಉದ್ಯಮಿ ರಮೇಶ ಸಾಲೇಚ ಅವರಿಗೆ ಸೇರಿದೆ. ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ನಗರಸಭಾ ಸದಸ್ಯೆ ಸಂತೋಷಿಮಾ ಬಾಂಠಿಯಾ  ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ದರು.

‘ಇಲ್ಲಿನ ಅರಿಹಂತ ಕಾಲೊನಿಯನ್ನು ವಸತಿ ಪ್ರದೇಶ ಎಂದು 1998ರಲ್ಲಿ ಪರಿವರ್ತಿಸಲಾಗಿದೆ. ಆದರೆ ನಗರ ಯೋಜನಾ ಪ್ರಾಧಿಕಾರ ಕಟ್ಟಡ ವಿನ್ಯಾಸಕ್ಕೆ ಹೇಗೆ ಅನುಮೋದನೆ ನೀಡಿದೆ? ನಗರಸಭೆ ಸಿಬ್ಬಂದಿ ಸ್ಥಳ ಪರಿಶೀಲಿಸದೆ ಕಟ್ಟಡ ಪರವಾನಗಿ ನೀಡಿದ್ದಾರೆ’ ಎಂದು ಶಾಂತಿಕುಮಾರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನಗರಸಭೆಗೆ ದೂರು ನೀಡಲಾಗಿತ್ತು. ಕಟ್ಟಡ ನೆಲಸಮ ಮಾಡುವುದಾಗಿ ಒಮ್ಮೆ ನೋಟಿಸ್ ಜಾರಿ ಮಾಡಿದರೂ ಪೌರಾಯುಕ್ತರು ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ಜೈನ್ ಸಮಾಜದ ಮುಖಂಡ ಬಾಬುಲಾಲ್ ಬಾಂಠಿಯಾ ಆರೋಪಿಸಿದ್ದಾರೆ. 

‘ವಾರ್ಡ್‌ ನಂಬರ್ 5ರ ದೋಬಿವಾಡದ ಸಮೀಪ ಇರುವ ನಗರಸಭೆ ಆಸ್ತಿಸಂಖ್ಯೆ 2-4-74/51 ರಿಂದ 53 ಹಾಗೂ 2–4-74/60 ರಿಂದ 60 ಆಸ್ತಿಗಳ ಪಕ್ಕದಲ್ಲಿ ಬರುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಮೇಶ ಸಾಲೇಚಾ ಕಟ್ಟಡ ನಿರ್ಮಿಸಿದ್ದಾರೆ.

ಕಟ್ಟಡ ತೆರವುಗೊಳಿಸುವುದಾಗಿ ಪೌರಾಯುಕ್ತ ಖಾಜಾಮೋಹಿನುದ್ದೀನ್ 18.01.2017 ರಂದು ನೋಟಿಸ್ ಜಾರಿ ಮಾಡಿದ್ದರು. ನಾಲ್ಕು ತಿಂಗಳು ಕಳೆದರೂ ನಗರಸಭೆ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಆರೋಪಿಸುತ್ತಿರುವ ಅರಿಹಂತ ಕಾಲೊನಿ ನಿವಾಸಿಗಳು ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

‘ಪೂರಕ ದಾಖಲೆ ನೀಡಿದ ಬಳಿಕವೇ ನಗರ ಯೋಜನಾ ಪ್ರಾಧಿಕಾರದಿಂದ ಕಟ್ಟಡ ವಿನ್ಯಾಸದ ಅನುಮತಿ ಹಾಗೂ ನಗರಸಭೆಯಿಂದ ಕಟ್ಟಡದ ಪರವಾನಗಿ ಸಿಕ್ಕಿದೆ. ತೆರವು ಕಾರ್ಯಾಚರಣೆ ಮಾಡಿದರೆ ಕಾನೂನು ಮೊರೆ ಹೋಗಲಾಗುವುದು’ ಎಂದು ಕಟ್ಟಡದ ಮಾಲೀಕ ರಮೇಶ ಸಾಲೇಚಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.