ADVERTISEMENT

ಶಾಲೆ ಗೋಡೆಗಳ ಮೇಲೆ ದಾರ್ಶನಿಕರ ಚಿತ್ರ

ದಾನಿಗಳ ಕೊಡುಗೆಯಿಂದ ಅಭಿವೃದ್ಧಿ ಹೊಂದುತ್ತಿರುವ ಬಂಡಿಹರ್ಲಾಪುರ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 6:54 IST
Last Updated 28 ಸೆಪ್ಟೆಂಬರ್ 2016, 6:54 IST
ಶಾಲೆ ಗೋಡೆಗಳ ಮೇಲೆ ದಾರ್ಶನಿಕರ ಚಿತ್ರ
ಶಾಲೆ ಗೋಡೆಗಳ ಮೇಲೆ ದಾರ್ಶನಿಕರ ಚಿತ್ರ   

ಮುನಿರಾಬಾದ್‌: ಸಮೀಪದ ಹಳೆಬಂಡಿಹರ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ತನ್ನ ಹೊರನೋಟದಲ್ಲೇ ಗಮನ ಸೆಳೆಯುತ್ತಿದ್ದು, ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದಾರೆ. ಮಕ್ಕಳು ಶಾಲಾವರಣಕ್ಕೆ ಬರುತ್ತಿದ್ದಂತೆ ಉತ್ಸಾಹದಿಂದ ಪುಳಕಿತರಾಗುತ್ತಾರೆ.

ಏಕೆಂದರೆ ಶಾಲೆ ಗೋಡೆಮೇಲೆ ಸ್ವಾತಂತ್ರ್ಯಯೋಧರು, ಕವಿಗಳು, ದಾರ್ಶನಿಕರು ಮತ್ತು ಕಲಾದಿಗ್ಗಜರ ಭಾವಚಿತ್ರಗಳನ್ನು ಬರೆಸಲಾಗಿದೆ. ಖಂಡ, ದೇಶ, ರಾಜ್ಯ ಮತ್ತು ಜಿಲ್ಲೆಗಳ ನಕಾಶೆಗಳು, ಐತಿಹಾಸಿಕ ಹೋರಾಟಗಾರರು, ಶ್ರೇಷ್ಠ ವಿಜ್ಞಾನಿಗಳು, ಜ್ಞಾನಪೀಠ ಪ್ರಶಸ್ತಿ ಪುರಷ್ಕೃತರು, ಸಂತರು, ಸಮಾಜ ಸುಧಾರಕರ ಚಿತ್ರಗಳು ಹೊರಗೋಡೆಯ ಮೇಲೆ ಅನಾವರಣಗೊಂಡಿವೆ.

ತರಗತಿಯ ಒಳಾವರಣದಲ್ಲಿ ಕನ್ನಡ ಮತ್ತು ಆಂಗ್ಲ ವರ್ಣಮಾಲೆ, ವಿದ್ಯಾರ್ಥಿಗಳು ತಯಾರಿಸಿದ ಕಲಿಕೆಗೆ ಅನುಕೂಲವಾಗುವ ಪ್ರತಿಕೃತಿಗಳು, ಗಣಿತಸೂತ್ರ, ಚಿತ್ರಪಟಗಳು ಮಕ್ಕಳನ್ನು ಓದಲು ಪ್ರಚೋದಿಸುತ್ತವೆ. ಶಿಕ್ಷಕರು ಮತ್ತು ದಾನಿಗಳ ಶ್ರಮಕ್ಕೆ ಪ್ರತಿಫಲವೆಂಬಂತೆ ಮಕ್ಕಳೂ ಕೂಡ ಅಭ್ಯಾಸದಲ್ಲಿ ಮುಂದಿದ್ದಾರೆ ಎನ್ನುತ್ತಾರೆ ಅಲ್ಲಿನ ಪಾಲಕರು.
ಶಾಲೆಯಲ್ಲಿ 1ರಿಂದ 8ನೇ ತರಗತಿಯ ಸುಮಾರು 290 ಮಕ್ಕಳಿದ್ದಾರೆ. ಏಳು ಶಿಕ್ಷಕರಿದ್ದಾರೆ. ಶಿಕ್ಷಕರು ದಾನಿಗಳನ್ನು ಸಂಪರ್ಕಿಸುವ ಮೂಲಕ ಹಲವು ಸೌವಲತ್ತುಗಳನ್ನು ಶಾಲೆಗೆ ಪಡೆದಿದ್ದಾರೆ.

ಬಿಸಿಯೂಟದ ಸಾಮಗ್ರಿಗಳು, ಪೀಠೋಪಕರಣಗಳು, ಶಾಲಾ ಆವರಣಕ್ಕೆ ಸುಣ್ಣ ಬಣ್ಣ, ಚಿತ್ರಾವಳಿ ದಾನಿಗಳಿಂದ ಬಂದಿವೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ದೇವಣ್ಣ ಮೇಕಾಳಿತಮ್ಮ ಅನುದಾನದಲ್ಲಿ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

ಸಮೀಪದ ಶಿವಪುರ ಭೋರುಕಾ ವಿದ್ಯುತ್‌ ಕಂಪೆನಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಿಸಿಕೊಟ್ಟಿದೆ.ಗ್ರಾಮ ಪಂಚಾಯಿತಿಯಿಂದ ಆವರಣ ಗೋಡೆ ನಿರ್ಮಿಸಿಲಾಗಿದೆ.
ಈಚೆಗೆ ನಡೆದ ಸಾರ್ವ ಜನಿಕ ಸಮಾರಂಭದಲ್ಲಿ ಮಗುವಿಗೊಂದು ಸಸಿನೀಡಿ ಅವುಗಳನ್ನುಬೆಳೆಸುವ ಜವಾಬ್ದಾರಿಯನ್ನು ಮಗುವಿಗೆ ವಹಿಸಲಾಗಿದೆ. ಶಾಲಾ ಆವರಣ ಕೂಡ ಹಸಿರು ಹೊದ್ದು ಕೊಂಡಿದೆ ಚೆನ್ನಾಗಿದೆ.

ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ವಿಶೇಷ ಕಾಳಜಿ ವಹಿಸಿ ಸ್ವಚ್ಛತೆ ಮತ್ತು ಉತ್ತಮ ಪರಿಸರ ನಿರ್ಮಾಣ ಮಾಡಲು ಸಹಕರಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಕೆ.ಧರ್ಮಾ ತಿಳಿಸಿದರು.

‘ಜನಪದ ಕಲಾರತ್ನ’ ಪ್ರಶಸ್ತಿ ಪಡೆದಿರುವ ಶಾಲೆಯ ಶಿಕ್ಷಕ ಜೀವನಸಾಬ್‌ ವಾಲೀಕಾರ ಬಿನ್ನಾಳ ಪ್ರಸಿದ್ಧ ಜನಪದ ಹಾಡುಗಾರ. ಇವರ ಪರಿಶ್ರಮದಿಂದ ಇಲ್ಲಿನ ಮಕ್ಕಳು ಜನಪದ ಪ್ರಕಾರಗಳಾದ ಲಾವಣಿ ಹಾಡು, ಸುಗ್ಗಿ ಹಾಡು, ಗೀಗೀಪದ ಮತ್ತು ದೇಶಭಕ್ತಿಗೀತೆ ಹಾಡುವಲ್ಲಿ  ಗಮನ ಸೆಳೆದಿದ್ದಾರೆ.
ಗುರುರಾಜ ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.