ADVERTISEMENT

ಸದ್ವಿನಿಯೋಗವಾಗದ ಅನುದಾನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 11:09 IST
Last Updated 16 ಜುಲೈ 2017, 11:09 IST

ಕೊಪ್ಪಳ: ಗ್ರಾಮೀಣ ಜನರಿಗೆ ಮೂಲಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೂ ಅದು ಸದ್ವಿನಿಯೋಗ ಆಗುತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಅವರು ಶನಿವಾರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಒಮ್ಮೆ ಚಾಲನೆ ನೀಡುತ್ತೀರಿ ಅಷ್ಟೆ. ಪದೇ ಪದೇ ನೀರು ಪೂರೈಕೆ ವ್ಯವಸ್ಥೆ ಏಕೆ ಕೆಟ್ಟು ಹೋಗುತ್ತಿದೆ. ಜನರ ದೂರಿಗೆ ಏನು ಉತ್ತರಿಸಬೇಕು’ ಎಂದು ಖಾರವಾಗಿ ಪ್ರಶ್ನಿಸಿದರು. ‘ಕೇಂದ್ರದ ಯಾವ ಸರ್ಕಾರವೂ ಇಷ್ಟೊಂದು ಪ್ರಮಾಣದ ಅನುದಾನ ನೀಡಿಲ್ಲ. ಆದರೆ, ಅದರ ಪ್ರಯೋಜನವನ್ನು ಜನರಿಗೆ ತಲುಪಿಸು ವಲ್ಲಿ ವಿಫಲರಾಗಿದ್ದೀರಿ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಕುಡಿಯುವ ನೀರು ಸರಬರಾಜು ಯೋಜನೆ, ಶಾಲೆಗಳಿಗೆ ಮೂಲಸೌಲಭ್ಯ ಒದಗಿಸುವುದು, ರಸ್ತೆ ನಿರ್ಮಾಣ ಸಂಬಂಧಿಸಿದಂತೆ ಸಾಕಷ್ಟು ಯೋಜನೆಗಳು ಮಂಜೂರಾಗಿದ್ದರೂ ಯಾವುದರ ಸ್ಪಷ್ಟ ಕ್ರಿಯಾ ಯೋಜನೆ, ಅಂದಾಜು ಪಟ್ಟಿ, ಅನುಷ್ಠಾನದ ವರದಿಗಳು ಇಲ್ಲ. ಕೊನೇ ಪಕ್ಷ ಸದಸ್ಯರ ಗಮನಕ್ಕೂ ತರುವುದಿಲ್ಲ’ ಎಂದು ಸಮಿತಿ ಸದಸ್ಯ ಸತ್ಯನಾರಾಯಣರಾವ್‌ ದೇಶಪಾಂಡೆ ಅಸಮಾಧಾನ ಹೊರಹಾಕಿದರು.

ADVERTISEMENT

‘ಫಸಲ್‌ ಭಿಮಾ ಯೋಜನೆಯ ಅಡಿಯಲ್ಲಿ ಎಷ್ಟು ಮಂದಿಗೆ ಪರಿಹಾರ ಸಿಕ್ಕಿದೆ? ನಿತ್ಯ ರೈತರ ದೂರು ಬರುತ್ತಿದೆ ಏಕೆ ಹೀಗೆ’ ಎಂದು ಸಂಸದರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ವೀರೇಶ ಹುನಗುಂದ, ‘ಕೆಲವರ ಬ್ಯಾಂಕ್‌ ಖಾತೆ ದಾಖಲೆಗಳು ಸಮರ್ಪಕವಾಗಿ ಇರುವುದಿಲ್ಲ. ಇನ್ನು ಕೆಲವು ಕಂಪೆನಿಗಳ ಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಕೆಲವರದ್ದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಇದೆ. ಇನ್ನು ಕೆಲವು ರೈತರದ್ದು ಸಹಕಾರ ಬ್ಯಾಂಕ್‌ಗಳಲ್ಲಿ ಇವೆ.

ಹೀಗಾಗಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿಮಾ ಯೋಜನೆಯಲ್ಲಿ ಇನ್ನೂ ನೋಂದಣಿ ಕಾರ್ಯ ಮುಂದುವರಿದಿದೆ’ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ‘ಫಸಲ್‌ಭಿಮಾ ಯೋಜನೆಗೆ ಸ್ಪಂದಿಸಲು ಜಿಲ್ಲಾಡಳಿತ ಭವನದಲ್ಲೇ ಒಂದು ಕೌಂಟರ್‌ ತೆರೆಯಬಹುದು. ಕೃಷಿ ಇಲಾಖೆ ಮತ್ತು ವಿಮಾ ಕಂಪೆನಿಯ ಪ್ರತಿನಿಧಿಗಳು ನೋಂದಣಿ ಪ್ರಕ್ರಿಯೆ ನಡೆಸಬಹುದು’ ಎಂದರು.

ವಿಮಾ ಯೋಜನೆಯ ನೋಂದಣಿ ಅವಧಿ ವಿಸ್ತರಣೆ ಮಾಡಲೂಬಹುದು ಎಂದು ಕೆಲವು ಸದಸ್ಯರು ಸಲಹೆ ಮಾಡಿದರು. ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಮತ್ತೆ ರೈತರು ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಮುಂಜಾಗೃತೆ ವಹಿಸಬೇಕು ಎಂದು ಸಂಗಣ್ಣ ಸಲಹೆ ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್‌ ಹೆಗ್ಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‌ ಘಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.