ADVERTISEMENT

ಸರ್ಕಾರಿ ಶಾಲೆಗೆ ‘ಕಿತ್ತಳೆ ಪ್ರಶಸ್ತಿ’ ಗರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 7:02 IST
Last Updated 17 ಸೆಪ್ಟೆಂಬರ್ 2014, 7:02 IST

ಮುನಿರಾಬಾದ್‌: ಹೊಸಮುದ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಲವು ಪ್ರತಿಭೆಗಳನ್ನು ಬೆಳಸಿದ ಕೀರ್ತಿ ಇದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬಹುದೊಡ್ಡ ಗುರಿಗೆ ತಲುಪಿದೆ.

2001ರ ಶೈಕ್ಷಣಿಕ ವರ್ಷದಲ್ಲಿ ಸಮುದಾಯ ಭವನದಲ್ಲಿ ಶಾಲೆ ಆರಂಭ ಮಡಲಾಯಿತು. ನಂತರದ ಕೆಲವು ವರ್ಷಗಳಲ್ಲಿ ಬೆಳೆದು ಸ್ವಂತ ಕಟ್ಟಡ, ಉತ್ತಮ ಪರಿಸರದ ವಾತಾವರಣ ಪಡೆಯಿತು. ಪ್ರಸ್ತುತ 5ನೇ ತರಗತಿಯವರಗೆ ಮೂರು ಶಿಕ್ಷಕರನ್ನು ಹೊಂದಿದೆ. ಶಾಲೆ ಆವರಣದಲ್ಲಿನ ಸ್ವಚ್ಛತೆ ಮತ್ತು ಗಿಡಮರಗಳ ಬೆಳಸಿರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಪರಿಸರ ಮಿತ್ರ ವಿಭಾಗದ ‘ಕಿತ್ತಳೆ’ ಶಾಲೆ ಎಂಬ ಪ್ರಶಸ್ತಿ ಬಾಚಿಕೊಂಡಿದೆ.

ಶಿಕ್ಷಕರಾದ ಲಕ್ಷ್ಮಣ ಗೌಂಡಿ ಮತ್ತು ಪರಸಪ್ಪ ಕಂಬಳಿ  ಮಕ್ಕಳು ಮತ್ತು ಗ್ರಾಮಸ್ಥರ ನೆರವಿನಿಂದ ಶಾಲೆ ಆವರಣದಲ್ಲಿ ಗಿಡ ಮರ ನೆಟ್ಟು ಸುಂದರ ಪರಿಸರ ಬೆಳೆಸುವಲ್ಲಿ ಮುನ್ನುಡಿ ಬರೆದರು. ಶಾಲೆಯ ಆವರಣದಲ್ಲಿ ತೆಂಗು, ಆಲ, ಹೊಂಗೆ, ಬದಾಮಿ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಬೆಳಸಿ ಪೋಷಣೆ ಮಾಡಲಾಗುತ್ತಿದೆ. ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ಅಗತ್ಯ ತರಕಾರಿಗಳನ್ನು ಶಾಲೆ ಆವರಣದಲ್ಲಿ ಬೆಳೆಸಲಾಗುತ್ತಿದೆ.

ಮರಗಳ ರಕ್ಷಣೆಗಾಗಿ ಗ್ರಾಮ ಪಂಚಾಯಿತಿ ಮತ್ತು ಜನಪ್ರತಿನಿಧಿಗಳನ್ನು ದುಂಬಾಲು ಬಿದ್ದು, ಶಾಲೆಯ ಸುತ್ತ ಕಾಂಪೌಂಡ  ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಆವರಣ ಗೋಡೆ, ಕುಡಿವ ನೀರಿನ ವ್ಯವಸ್ಥೆ, ಸಭಾ ಮಂಟಪ ನಿರ್ಮಾಣಕ್ಕೆ  ಸಹಕಾರ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಲಚಂದ್ರನ್‌ ಮತ್ತು ರಾಧಿಕಾ ರವಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಬಾನು ಚಂದುಸಾಬ್‌, ಎಸ್‌ಡಿಎಂಸಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರನ್ನು ಶಿಕ್ಷಕ ಬಾಳಪ್ಪ ತಳವಾರ ಸ್ಮರಿಸುತ್ತಾರೆ.

ಪ್ರತಿಭಾ ಕಾರಂಜಿ, ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ದಾನಿಗಳನ್ನು ಆಹ್ವಾನಿಸಿ ಅವರಿಂದ ನೆರವನ್ನು ಪಡೆದು ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದಾನಿಗಳಿಂದ ಶಾಲೆಯ ಮಕ್ಕಳಿಗೆ ಬ್ಯಾಗ್‌, ನೋಟ್‌ಬುಕ್‌, ಟೈ–ಬೆಲ್ಟ್‌ಗಳನ್ನು ನೀಡಲಾಗಿದೆ. ಎಸ್‌ಬಿಎಂ, ಎಸ್‌ಬಿಐ ಬ್ಯಾಂಕ್‌ಗಳು ಶಾಲೆಗೆ ನೀರು ಶುದ್ಧೀಕರಣ ಯಂತ್ರ ಮತ್ತು ಫ್ಯಾನ್‌ ಪಡೆಯಲಾಗಿದೆ. ಶಾಲೆಯನ್ನು ಸುಂದರಗೊಳಿಸಲಾಗಿದೆ.

ಶಾಲೆಯ ಮಕ್ಕಳು ಹೊಸಪೇಟೆ ಆಕಾಶವಾಣಿ ಕೇಂದ್ರಕ್ಕೆ ಹೋಗಿ ಹಾಡು, ನಾಟಕ ಪ್ರದರ್ಶನ ಮಾಡುವ ಮೂಲಕ ತಮ್ಮ ಪ್ರತಿಭೆ ಮೆರೆದಿದ್ದಾರೆ. ಪ್ರತಿವರ್ಷ ಈ ಶಾಲೆಯಿಂದ ನವೋದಯ, ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗೆ ಇಲ್ಲಿನ ಮಕ್ಕಳು ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಿ ಆಯ್ಕೆಯಾಗುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.